2018-19ರಲ್ಲಿ ರೈಲ್ವೆ ಪ್ರಯಾಣಿಕರ ಸಂಖ್ಯೆ ಶೇ.1.85,ಸರಕು ಸಾಗಣೆ ಶೇ.5.34 ಏರಿಕೆ: ಆರ್ಥಿಕ ಸಮೀಕ್ಷೆ
ಹೊಸದಿಲ್ಲಿ, ಜ.31: 2018-19ನೇ ಸಾಲಿನಲ್ಲಿ ಭಾರತೀಯ ರೈಲುಗಳಲ್ಲಿ ಪ್ರಯಾಣಿಸಿದವರ ಸಂಖ್ಯೆಯಲ್ಲಿ ಶೇ.1.85ರಷ್ಟು ಮತ್ತು ರೈಲ್ವೆಯಿಂದ ಸರಕು ಸಾಗಣೆ ಪ್ರಮಾಣದಲ್ಲಿ ಶೇ.5.34ರಷ್ಟು ಏರಿಕೆಯಾಗಿದೆ ಎಂದು ಶುಕ್ರವಾರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ 2019-20ನೇ ಸಾಲಿನ ಆರ್ಥಿಕ ಸಮೀಕ್ಷೆ ವರದಿಯು ತಿಳಿಸಿದೆ.
2018-19ನೇ ಸಾಲಿನಲ್ಲಿ ರೈಲ್ವೆಯು 122.15 ಕೋಟಿ ಟನ್ ಸರಕುಗಳು ಮತ್ತು 843.90 ಕೋಟಿ ಪ್ರಯಾಣಿಕರನ್ನು ಸಾಗಿಸುವ ಮೂಲಕ ವಿಶ್ವದ ಅತ್ಯಂತ ದೊಡ್ಡ ಪ್ರಯಾಣಿಕರ ಮತ್ತು ನಾಲ್ಕನೇ ಅತ್ಯಂತ ದೊಡ್ಡ ಸರಕು ಸಾಗಣೆದಾರನಾಗಿ ಹೊರಹೊಮ್ಮಿದೆ ಎಂದು ವರದಿಯು ಹೇಳಿದೆ. ಅದರ ಹಿಂದಿನ 2017-18ನೇ ಸಾಲಿನಲ್ಲಿ 828.58 ಕೋ.ಪ್ರಯಾಣಿಕರು ಭಾರತೀಯ ರೈಲುಗಳಲ್ಲಿ ಪ್ರಯಾಣಿಸಿದ್ದರು ಮತ್ತು 115.96 ಕೋ.ಟನ್ ಸರಕುಗಳನ್ನು ಸಾಗಿಸಲಾಗಿತ್ತು.
ರೈಲ್ವೆಯು ಸುರಕ್ಷತೆಗೆ ಅತ್ಯಂತ ಹೆಚ್ಚಿನ ಆದ್ಯತೆಯನ್ನು ನೀಡಿದೆ ಮತ್ತು ಅಪಘಾತಗಳನ್ನು ತಡೆಯಲು ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದೂ ವರದಿಯು ಬೆಟ್ಟು ಮಾಡಿದೆ.





