ಭಾಷೆಗಳ ಬೆಳವಣಿಗೆಗೆ ಇನ್ನಷ್ಟು ಒತ್ತುಕೊಡುವ ಅಗತ್ಯವಿದೆ: ಸಮ್ಮೇಳನಾಧ್ಯಕ್ಷ ನಾಗೇಶ್ ಕಾಲೂರು
ಕೊಡಗು ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ

ಮಡಿಕೇರಿ, ಜ.31: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸೋಮವಾರಪೇಟೆ ತಾಲೂಕು ನಿಡ್ತ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶುಕ್ರವಾರ ಕೊಡಗು ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.
ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೂರು ನಾಗೇಶ್ ಅವರು ಭಾಷಾ ಕಲಿಕೆ ಒಂದು ಕೌಶಲ್ಯ, ಎಳವೆಯಲ್ಲಿ ಮಕ್ಕಳು ಹಲವಾರು ಭಾಷೆಗಳನ್ನು ಒಟ್ಟಿಗೆ ಕಲಿಯುವ ಕೌಶಲ್ಯ ಹೊಂದಿರುತ್ತಾರೆ. ಭಾಷೆ ಬಾಂಧವ್ಯ ಹೆಚ್ಚಿಸುತ್ತದೆ. ಎಷ್ಟು ಹೆಚ್ಚು ಭಾಷೆಗಳನ್ನು ಕಲಿಯುತ್ತೇವೋ ಅಷ್ಟು ಬಾಂಧವ್ಯಗಳು ನಮ್ಮದಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಯಾವುದೇ ವ್ಯಕ್ತಿ ತನ್ನ ಮಾತೃ ಭಾಷೆಯನ್ನು ಕೇಳಿದಾಕ್ಷಣ ಪುಳಕಿತನಾಗುತ್ತಾನೆ. ತನ್ನ ಭಾವನೆಗಳನ್ನು ಹಂಚಿಕೊಳ್ಳಲು ತವಕಿಸುತ್ತಾನೆ. ಅಂದರೆ ಒಬ್ಬ ವ್ಯಕ್ತಿ ತನ್ನದೇ ಮಾತೃ ಭಾಷೆಯಲ್ಲಿ ಮಾತ್ರ ಹೆಚ್ಚು ಸ್ಪಂದಿಸಲು ಇಷ್ಟಪಡುತ್ತಾನೆ. ಪರಸ್ಪರರೊಂದಿಗೆ ವ್ಯವಹರಿಸಲು, ತನ್ಮೂಲಕ ಬದುಕನ್ನು ಸಹ್ಯವಾಗಿಸಿಕೊಳ್ಳಲು ನಮಗೆ ಹೆಚ್ಚು ಭಾಷೆಗಳು ತಿಳಿದಿದ್ದರೆ ಒಳ್ಳೆಯದು. ಜಿಲ್ಲೆಯಲ್ಲಿ ಇನ್ನೂ ಬೆಳಕಿಗೆ ಬಾರದಿರುವ ಐತಿಹ್ಯಗಳು, ಆಚರಣೆಗಳು ಸಾಕಷ್ಟಿದ್ದು, ಇವುಗಳ ಕುರಿತಾಗಿ ಸಂಶೋಧನೆಗೆ ಅವಕಾಶವಿದೆ ಎಂದು ನಾಗೇಶ್ ಕಾಲೂರು ಅವರು ಹೇಳಿದರು.
ಬರಹಗಾರರು, ಲೇಖಕರು ಈ ದೇಶದ ಸಾಮಾಜಿಕ ಬದುಕಿನ ಕೈಗನ್ನಡಿಗಳಾಗಿರುವುದರಿಂದ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವುದಲ್ಲದೆ ಅದರ ಪರಿಹಾರೋಪಾಯದ ಬಗೆಗೂ ಮಾರ್ಗದರ್ಶಕರಾಗಿರಬೇಕಾಗುತ್ತದೆ. ಯಾವುದೇ ಪಕ್ಷ, ಪಂಗಡಗಳ ಮರ್ಜಿಗೆ ಒಳಗಾಗದೆ ನಾವೆಲ್ಲರೂ ಭಾರತೀಯರೆಂಬ ನಿಲುವಿನೊಂದಿಗೆ ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿಸುವುದರಲ್ಲಿ ಭಾಷೆ, ಸಾಹಿತ್ಯವನ್ನು ನಿಷ್ಪಕ್ಷವಾಗಿ ದುಡಿಸಿಕೊಳ್ಳುವತ್ತ ಮುಂದಿನ ಪೀಳಿಗೆಗೆ ಮಾರ್ಗದರ್ಶಕ ಆಗಿರಬೇಕಾಗಿದೆ ಎಂದು ಸಮ್ಮೇಳನಾಧ್ಯಕ್ಷರು ನುಡಿದರು.
ರಾಜ್ಯದ ಇತರೆಡೆಗಳಿಗೆ ಹೋಲಿಸಿದಾಗ ಎಲ್ಲಾ ದೃಷ್ಟಿಯಿಂದಲೂ ಕೊಡಗು ವಿಭಿನ್ನವಾಗಿ ನಿಲ್ಲುತ್ತದೆ. ಅದಕ್ಕೆ ಕಾರಣ ಇಲ್ಲಿನ ಬಹುಭಾಷಿಕ ಸಮುದಾಯ ಮತ್ತು ಸಂಸ್ಕೃತಿ, ಕನ್ನಡ, ಕೊಡವ, ಅರೆಭಾಷೆ, ತುಳು, ಬ್ಯಾರಿ, ಮಲಯಾಳಂ, ತಮಿಳು, ಹವ್ಯಕ, ಉರ್ದು ಹೀಗೆ ಪಟ್ಟಿ ಬೆಳೆಯುತ್ತದೆ. ಇದರಲ್ಲಿ ಕೆಲವು ಭಾಷೆಗಳಿಗೆ ಕನ್ನಡವೇ ಲಿಪಿಯಾಗಿರುವುದರಿಂದ ಇಲ್ಲಿ ಪರೋಕ್ಷವಾಗಿ ಆಯಾಯ ಭಾಷೆಗಳ ಮೂಲಕ ಕನ್ನಡದ ಪೋಷಣೆಯೂ ನಡೆಯುತ್ತಿದೆ. ಕನ್ನಡ ಹಿರಿಯಣ್ಣನಾಗಿದ್ದುಕೊಂಡು ಈ ಭಾಷೆಗಳ ಬೆಳವಣಿಗೆಗೆ ಇನ್ನಷ್ಟು ಒತ್ತುಕೊಡುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ಭಾಷೆಯ ಪ್ರಾಚೀನತೆಯೊಂದಿಗೆ ಕನ್ನಡ ನಾಡಿನ ಎಲ್ಲೆಗಳನ್ನು ಕೂಡ ಕವಿರಾಜಮಾರ್ಗದಲ್ಲಿ ಹೇಳಲಾಗಿರುವುದು ಆಸಕ್ತಿದಾಯಕ. ಎರಡು ಸಾವಿರ ವರ್ಷಗಳಿಗೂ ಹಿಂದಿನಿಂದಲೇ ಕಾವೇರಿಯ ಮಡಿಲಲ್ಲಿ ಕನ್ನಡ ಇತ್ತು ಎನ್ನುವುದಕ್ಕೆ ಇದು ನಿದರ್ಶನ. ಹನ್ನೊಂದನೇ ಶತಮಾನದ ಶಿಲಾಶಾಸನದಲ್ಲಿ ಕೂಡಾ ಕೊಡಗಿನವರ ಉಲ್ಲೇಖವಿದೆ ಎಂದರು.
ಕೊಡಗಿನ ಗೌರಮ್ಮ ಸಣ್ಣಕಥೆಗಳ ಮೂಲಕ ಗಮನ ಸೆಳೆಯುತ್ತಾರೆ. ಭಾರತೀಸುತ ತಮ್ಮ ಕಾದಂಬರಿಗಳಲ್ಲಿ ಕೊಡಗಿನ ಸಾಂಸ್ಕೃತಿಕ ಹಿರಿಮೆಯನ್ನು ದಾಖಲಿಸುತ್ತಾರೆ. ಕೂತಂಡ ಪಾರ್ವತಿ ಪೂವಯ್ಯ, ಕಾಕೆಮಾನಿ, ಬಿ.ಡಿ.ಗಣಪತಿ ಇತರರು ಕನ್ನಡದ ಬೆಳವಣಿಗೆಯಲ್ಲಿ ಶ್ರಮಿಸಿದ್ದಾರೆ. ಪಂಜೆಯವರ ಹುತ್ತರಿ ಹಾಡಂತೂ ಇಂದಿಗೂ ಜನಮನ್ನಣೆ ಉಳಿಸಿಕೊಂಡಿದೆ. ಕನ್ನಡ ನಿಘಂಟು ಕರ್ತರಾದ ರೆವರೆಂಟ್ ಕಿಟ್ಟೆಲ್ ಅವರು ಕೂಡಾ ಕೊಡಗಿನಲ್ಲಿದ್ದುಕೊಂಡು ಕನ್ನಡದ ಕೆಲಸ ಮಾಡಿದ್ದಾರೆ ಎಂದು ನಾಗೇಶ್ ಕಾಲೂರು ಅವರು ಸ್ಮರಿಸಿದರು.







.jpg)
.jpg)

.jpg)

