ಕ್ರಿಸ್ಟಿನಾ, ಟಿಮಿಯಾಗೆ ಮಹಿಳಾ ಡಬಲ್ಸ್ ಪ್ರಶಸ್ತಿ
ಆಸ್ಟ್ರೇಲಿಯನ್ ಓಪನ್

ಮೆಲ್ಬೋರ್ನ್, ಜ.31: ಫ್ರಾನ್ಸ್ ನ ಕ್ರಿಸ್ಟಿನಾ ಮ್ಲಾಡೆನೊವಿಕ್ ಹಾಗೂ ಟಿಮಿಯಾ ಬಾಬೊಸ್ ಹಂಗೇರಿಯದ ಅಗ್ರ ಶ್ರೇಯಾಂಕದ ಸೀಯ್-ಸು-ವೀ ಹಾಗೂ ಬಾರ್ಬೊರ ಸ್ಟ್ರೈಕೋವಾರನ್ನು ಮಣಿಸುವುದರೊಂದಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಎರಡನೇ ಬಾರಿ ಮಹಿಳಾ ಡಬಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಇಲ್ಲಿ ಶುಕ್ರವಾರ ಒಂದು ಗಂಟೆ, 12 ನಿಮಿಷಗಳ ಕಾಲ ನಡೆದ ಮಹಿಳೆಯರ ಡಬಲ್ಸ್ ಫೈನಲ್‌ನಲ್ಲಿ ಹಾಲಿ ವಿಂಬಲ್ಡನ್ ಚಾಂಪಿಯನ್ ಮ್ಲಾಡೆನೊವಿಕ್ ಹಾಗೂ ಬಾಬೊಸ್ ಅವರು ಅಗ್ರ ಶ್ರೇಯಾಂಕದ ಸೀ-ವೀ ಹಾಗೂ ಸ್ಟ್ರೈಕೋವಾರನ್ನು 6-2, 6-1 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು.
ಕ್ರಿಸ್ಟಿನಾ-ಟಿಮಿಯಾ ಜೋಡಿ ಮೂರನೇ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಹಾಗೂ ಒಟ್ಟಾರೆ 10ನೇ ಬಾರಿ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೂರು ವರ್ಷಗಳ ಅಂತರದಲ್ಲಿ ಎರಡನೇ ಬಾರಿ ಡಬಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ನವೆಂಬರ್‌ನಲ್ಲಿ ಪರ್ತ್‌ನಲ್ಲಿ ಫ್ರಾನ್ಸ್ ಗೆ ಫೆಡ್ ಕಪ್ ಗೆದ್ದುಕೊಟ್ಟಿರುವ ಮ್ಲಾಡೆನೊವಿಕ್ ಕಳೆದ ವರ್ಷ ಬಾಬೊಸ್ ಜೊತೆಗೂಡಿ ಮೆಲ್ಬೋರ್ನ್‌ನಲ್ಲಿ ಡಬಲ್ಸ್ ಪಂದ್ಯದಲ್ಲಿ ಫೈನಲ್ ತಲುಪಿದ್ದರು. ಆದರೆ, ಸ್ಯಾಮ್ ಸ್ಟೋಸರ್ ಹಾಗೂ ಝಾಂಗ್ ಶುಐ ವಿರುದ್ಧ ಸೋಲನುಭವಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.
ದ್ವಿತೀಯ ಶ್ರೇಯಾಂಕದ ಮ್ಲಾಡೆನೊವಿಕ್ ಹಾಗೂ ಬಾಬೊಸ್ ಕಳೆದ ವರ್ಷ ವಿಂಬಲ್ಡನ್ ಸೆಮಿ ಫೈನಲ್‌ನಲ್ಲಿ ಸೀ-ವೀ ಹಾಗೂ ಸ್ಟ್ರೈಕೋವಾ ವಿರುದ್ಧ ಸೋತಿದ್ದರು. ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಪ್ರಶಸ್ತಿ ಜಯಿಸುವುದರೊಂದಿಗೆ ಆಸ್ಟ್ರೇಲಿಯನ್ ಓಪನ್‌ಗೆ ಭರ್ಜರಿ ತಯಾರಿ ನಡೆಸಿದ್ದ ಸೀ-ವೀ ಹಾಗೂ ಸ್ಟ್ರೈಕೋವಾ ಫೈನಲ್ ತಲುಪುವ ತನಕ ಒಂದೂ ಸೆಟ್‌ನ್ನು ಸೋತಿರಲಿಲ್ಲ.







