ನ್ಯಾಯಾಂಗವಿರುವುದೇ ಮೂಲಭೂತ ಹಕ್ಕುಗಳ ರಕ್ಷಣೆಗೆ: ನ್ಯಾ.ಎಸ್.ಅಬ್ದುಲ್ ನಜೀರ್
ಬೆಂಗಳೂರು, ಜ.31: ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಇರುವುದೇ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ರಕ್ಷಣೆ ಮಾಡಲು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಹೇಳಿದ್ದಾರೆ.
ಶುಕ್ರವಾರ ಹೈಕೋರ್ಟ್ ಸಭಾಂಗಣದಲ್ಲಿ ಲಹರಿ ಅಡ್ವೊಕೇಟ್ ಫೋರಂ ಆಯೋಜಿಸಿದ್ದ ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮತ್ತು ಶಾಸಕಾಂಗದ ಕ್ರಮ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತವು ಬಹುದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಸಂವಿಧಾನ ಈ ದೇಶದ ಎಲ್ಲ ನಾಗರಿಕರಿಗೂ ಮೂಲಭೂತ ಹಕ್ಕು, ಮೂಲಭೂತ ಕರ್ತವ್ಯಗಳನ್ನು ರಕ್ಷಣೆ ಮಾಡುವ ಮೂಲಕ ಶಕ್ತಿ ತುಂಬುತ್ತಿದೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ಸೇರಿದಂತೆ ದೇಶದ ಹಲವು ಕೋರ್ಟ್‌ಗಳು ದೇಶದ ಜನರ ಪರವಾಗಿ ಆರೋಗ್ಯ, ಶಿಕ್ಷಣ, ವಸತಿ ಸೇರಿ ಇನ್ನಿತರ ವಿಚಾರಗಳಲ್ಲಿ ಮಹತ್ವದ ತೀರ್ಪುಗಳನ್ನು ನೀಡಿದೆ. ಜನರಿಗೆ ಧ್ವನಿಯಾಗಲು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು. ನಾನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾದರೂ ನನಗೆ ನನ್ನ ಊರೇ ಇಷ್ಟವಾಗುತ್ತದೆ. ಸುಪ್ರೀಂ ಕೋರ್ಟ್ ದೂರದ ಬೆಟ್ಟದಂತೆ ಚೆಂದವಾಗಿ ಕಾಣುತ್ತದೆ ಎಂದು ಹೇಳಿದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮಾತನಾಡಿ, ಸಂವಿಧಾನದ ಮೂಲಕ ಮೂಲಭೂತ ಹಕ್ಕುಗಳನ್ನು ರಕ್ಷಣೆ ಮಾಡಲಾಗುತ್ತಿದ್ದು. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಹರಿ ಅಡ್ವೊಕೇಟ್ ಫೋರಂ ಅಧ್ಯಕ್ಷ ಪಿ.ಅನು ಚೆಂಗಪ್ಪ ಉಪಸ್ಥಿತರಿದ್ದರು.







