ನ್ಯಾಯಾಧೀಶ ಲೋಯಾ ಸಾವು ಪ್ರಕರಣ: ಹೊಸ ತನಿಖೆಗಾಗಿ ಮುಂಬೈನಲ್ಲಿ ಪ್ರತಿಭಟನೆ

ಮುಂಬೈ, ಫೆ.1: ಸಿಬಿಐನ ವಿಶೇಷ ನ್ಯಾಯಾಧೀಶ ಬಿ.ಎಚ್.ಲೋಯಾ 2014ರಲ್ಲಿ ಶಂಕಾಸ್ಪದವಾಗಿ ಸಾವನ್ನಪ್ಪಿರುವ ಕುರಿತಂತೆ ಹೊಸತಾಗಿ ತನಿಖೆ ನಡೆಸುವಂತೆ ಆಗ್ರಹಿಸಿ ದಕ್ಷಿಣ ಮುಂಬೈನಲ್ಲಿ 30ಕ್ಕೂ ಅಧಿಕ ಜನರಿದ್ದ ಗುಂಪು ಕೆಲ ಕಾಲ ಪ್ರತಿಭಟನೆ ನಡೆಸಿತು.
ಮಹಾತ್ಮ ಗಾಂಧೀಜಿ ಪುಣ್ಯತಿಥಿಯಂದು ಗುರುವಾರ ಗೇಟ್ ವೇ ಆಫ್ ಇಂಡಿಯಾ ಬಳಿ ಜಮಾಯಿಸಿದ ಜನರು ‘ಹೂ ಕಿಲ್ಡ್ ಜಡ್ಜ್ ಲೋಯಾ?’ಎಂದು ಬರೆದಿದ್ದ ಟೀ-ಶರ್ಟ್‌ಗಳನ್ನು ಧರಿಸಿ 15 ನಿಮಿಷಗಳ ಕಾಲ ಪ್ರತಿಭಟನೆ ನಡೆಸಿದರು. ‘ಸತ್ಯಮೇವ ಜಯತೇ’ ಎಂದು ಬರೆದಿರುವ ಮಹಾತ್ಮಗಾಂಧಿ ಚಿತ್ರವಿರುವ ಬ್ಯಾನರ್‌ನ್ನು ಪ್ರದರ್ಶಿಸಿದರು.
‘‘ಜಸ್ಟಿಸ್ ಲೋಯಾ ಶಂಕಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿದ್ದರು. ಸಾವಿನ ಪ್ರಕರಣವನ್ನು ನಿಷ್ಪಕ್ಷವಾಗಿ ತನಿಖೆ ನಡಸಬೇಕು ಎನ್ನುವುದು ನಮ್ಮ ಬೇಡಿಕೆ. ಸರಕಾರ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು. ನ್ಯಾಯಾಲಯದ ವಿಚಾರಣೆ ಆರಂಭವಾಗಬೇಕು’’ ಎಂದು ಪ್ರತಿಭಟನೆಕಾರರೊಬ್ಬರು ತಿಳಿಸಿದ್ದಾರೆ.
ಎನ್‌ಸಿಪಿ-ಶಿವಸೇನೆ ಹಾಗೂ ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜಸ್ಟಿಸ್ ಲೋಯಾ ಸಾವು ಪ್ರಕರಣವನ್ನು ಹೊಸತಾಗಿ ತನಿಖೆ ನಡೆಸುವ ವಿಶ್ವಾಸ ನಮ್ಮಲ್ಲಿ ಹೆಚ್ಚಾಗಿದೆ ಎಂದು ಇನ್ನೊಬ್ಬ ಪ್ರತಿಭಟನೆಕಾರರು ತಿಳಿಸಿದ್ದಾರೆ.







