ಫಾದರ್ ಮುಲ್ಲರ್ ಕಾಲೇಜಿನಲ್ಲಿ ‘ಸೈಂಟಿಯಾ’ ಕಾರ್ಯಾಗಾರ

ಮಂಗಳೂರು, ಫೆ.1: ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್ (ಎಫ್‌ಎಂಸಿಐ) ಅಧೀನದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು (ಎಫ್‌ಎಂಎಂಸಿ) ಹಾಗೂ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ ವಿಭಾಗದಿಂದ ನಗರದ ಫಾದರ್ ಮುಲ್ಲರ್ ಕಾಲೇಜು ಆವರಣದ ಡಿಸೆನಿಯಲ್ ಮೆಮೋರಿಯಲ್ ಹಾಲ್‌ನಲ್ಲಿ ಶನಿವಾರ ‘ಸೈಂಟಿಯಾ 2020’ ಕಾರ್ಯಾಗಾರ ನಡೆಯಿತು.
ಯೆನೆಪೊಯ ಕಾಲೇಜಿನ ಪ್ಯಾಥೊಲಜಿ ವಿಭಾಗದ ಮುಖ್ಯಸ್ಥ ಪ್ರೊ.ರಾಮದಾಸ್ ನಾಯಕ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮನುಷ್ಯನಿಗೆ ವ್ಯಕ್ತಿತ್ವ ಅತಿಅಗತ್ಯವಾಗಿದೆ. ಸದಾ ಕಾಲ ಸಕರಾತ್ಮಕವಾಗಿಯೇ ಆಲೋಚಿಸಬೇಕು. ಮೊದಲು ನಾವು ಸರಿದಾರಿಯಲ್ಲಿ ನಡೆಯಬೇಕು. ಬಳಿಕವೇ ಮತ್ತೊಬ್ಬರಿಗೆ ಉಪದೇಶ ನೀಡಬಹುದು ಎಂದು ಹೇಳಿದರು.
ಹಣದಿಂದ ಎಲ್ಲವನ್ನೂ ಖರೀದಿಸಬಹುದು. ಆದರೆ ಸಂತೋಷ, ಖುಷಿಯನ್ನಲ್ಲ. ಆನಂದ ಎನ್ನುವುದು ಎಲ್ಲರಿಗೂ ಬೇಕು. ಇದನ್ನು ನಮಗೆ ನಾವೇ ಅರ್ಪಿಸಿಕೊಳ್ಳುವಂತದ್ದು. ಎಲ್ಲರೂ ಅವರ ಪ್ರಕಾರ ಸರಿಯಾಗಿಯೇ ಇರುತ್ತಾರೆ. ಇನ್ನೊಬ್ಬರನ್ನು ಟೀಕಿಸುವ ಭರದಲ್ಲಿ ನಾವು ದುಡುಕುವ ಸಾಧ್ಯತೆಯೂ ಇರುತ್ತದೆ. ನಮ್ಮನ್ನು ನಾವು ಬದಲಾವಣೆಗೆ ಹೊಂದಿಸಿಕೊಳ್ಳಬೇಕು. ನಂತರವೇ ನಮ್ಮ ಪಕ್ಕದಲ್ಲಿರುವವರಿಗೆ ಸಲಹೆ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಎಫ್‌ಎಂಸಿಐ ನಿರ್ದೇಶಕ ರೆ.ಫಾ.ರಿಚಾರ್ಡ್ ಎ. ಕುವೆಲ್ಲೊ ಮಾತನಾಡಿ, ಆಧುನಿಕ ಯುಗದಲ್ಲೂ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ಕೈಗೊಳ್ಳುವುದು ಅಗತ್ಯ. ಆಧುನಿಕತೆಯಲ್ಲೂ ವಿವಿಧ ನಮೂನೆಯ ಸೋಂಕುಗಳು ಹರಡುತ್ತಿದ್ದು, ಇವುಗಳಿಗೆ ಔಷಧ ಕಂಡು ಹಿಡಿಯುವುದೂ ಸವಾಲಾಗಿ ಪರಿಣಮಿಸಿದೆ. ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ ವಿಭಾಗದ ಕಾರ್ಯವು ಮಹತ್ತರವಾಗಿದೆ. ವೈದ್ಯರಿಗಿಂತಲೂ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದ ತಂತ್ರಜ್ಞರಿಗೆ ಹೆಚ್ಚು ಆತ್ಮವಿಶ್ವಾಸ ಹೊಂದಿರಬೇಕು. ಸೋಂಕು ಹರಡಿದ ಸಮಯದಲ್ಲೇ ಔಷಧದ ಅನ್ವೇಷಣೆ ಯಿಂದ ಜೀವ ಹಾನಿ ತಪ್ಪಿಸಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಫ್‌ಎಂಎಂಸಿ ಆಡಳಿತಾಧಿಕಾರಿ ರೆ.ಫಾ. ಅಜಿತ್ ಮೆನೇಜಸ್, ಡೀನ್ ಡಾ.ಜಯಪ್ರಕಾಶ್ ಆಳ್ವ, ವೈಸ್ ಡೀನ್ ಡಾ.ಪದ್ಮಜಾ ಉದಯಕುಮಾರ್, ಕಾರ್ಯಾಗಾರ ಸಂಘಟನಾ ಅಧ್ಯಕ್ಷ ಡಾ.ಸುಮಂತ್ ಡಿ., ಕಾರ್ಯದರ್ಶಿ ಡಾ.ರಮ್ಯಾ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಾಧ್ಯಾಪಕರು, ಸಿಬ್ಬಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಸ್ಟರ್ ಸಾನಿಯಾ ತಂಡವು ಪ್ರಾರ್ಥಿಸಿತು. ಎಫ್‌ಎಂಎಂಸಿ ಡೀನ್ ಡಾ. ಜಯಪ್ರಕಾಶ್ ಆಳ್ವ ಸ್ವಾಗತಿಸಿದರು. ವೈದ್ಯಕೀಯ ವಿದ್ಯಾರ್ಥಿನಿಯರಾದ ಅವಿಲಾ, ಪ್ರೀತಿ ಕಾರ್ಯಕ್ರಮ ನಿರೂಪಿಸಿದರು. ಡಾ.ರಮ್ಯಾ ಸತೀಶ್ ವಂದಿಸಿದರು.









