5ರಿಂದ 7.5 ಲಕ್ಷ ರೂ. ಆದಾಯಕ್ಕೆ ಶೇ.10ರಷ್ಟು ತೆರಿಗೆ: ನಿರ್ಮಲಾ ಸೀತಾರಾಮನ್
ಕೇಂದ್ರ ಬಜೆಟ್ 2020-21

ಹೊಸದಿಲ್ಲಿ, ಫೆ. 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಬಜೆಟ್ ಮಂಡಿಸಿದರು. 2019 ಮೇ ತಿಂಗಳಲ್ಲಿ ನರೇಂದ್ರ ಮೋದಿ ಪಡೆದ ಬೃಹತ್ ಜನಾದೇಶವನ್ನು ಉಲ್ಲೇಖಿಸುತ್ತಾ ಅವರು ತನ್ನ ಬಜೆಟ್ ಭಾಷಣವನ್ನು ಆರಂಭಿಸಿದರು.
ಇದು ಪ್ರಾಥಮಿಕವಾಗಿ ಜನರ ಆದಾಯ ಹೆಚ್ಚಿಸುವ ಹಾಗೂ ಗ್ರಾಹಕರ ಖರ್ಚು ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುವ ಬಜೆಟ್ ಎಂದು ನಿರ್ಮಲಾ ಘೋಷಿಸಿದರು. ಆದರೆ, ಇದನ್ನು ಸಾಧಿಸಲು ಸರಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎನ್ನುವುದು ಭಾಷಣದ ಕೊನೆಯವರೆಗೂ ತಿಳಿಯಲಿಲ್ಲ.
ಮೋದಿ ಸರಕಾರದ ಆರ್ಥಿಕ ‘ಸಾಧನೆ’ಗಳನ್ನು ಪಟ್ಟಿ ಮಾಡುವ ಮೂಲಕ ನಿರ್ಮಲಾ ತನ್ನ ಭಾಷಣವನ್ನು ಆರಂಭಿಸಿದರು. ಸಾಧನೆಗಳನ್ನು ಪಟ್ಟಿ ಮಾಡುತ್ತಾ, ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ)ಯ ಆರಂಭಿಕ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಈ ಬಗ್ಗೆ ಮಾತನಾಡಲು ಅವರು ಗಣನೀಯ ಸಮಯವನ್ನು ವ್ಯಯಿಸಿದರು. ಆದರೆ ಈ ವರ್ಷ ಸರಕಾರದ ಅತಿ ದೊಡ್ಡ ಕಂದಾಯ ಸಮಸ್ಯೆಯಾದ ಕಡಿಮೆ ಜಿಎಸ್‌ಟಿ ಸಂಗ್ರಹದ ಬಗ್ಗೆ ಏನೂ ಹೇಳಲಿಲ್ಲ.
ಮೂರು ಮುಖ್ಯ ವಿಷಯಗಳ ಸುತ್ತ ಈ ಬಾರಿಯ ಬಜೆಟನ್ನು ಹೆಣೆಯಲಾಗಿದೆ ಎಂದು ನಿರ್ಮಲಾ ಹೇಳಿದರು. ಅವುಗಳೆಂದರೆ: 1) ನವ ಭಾರತದ ಆಶೋತ್ತರಗಳು (ಜನರು ಉತ್ತಮ ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯಸೇವೆಯನ್ನು ಬಯಸುತ್ತಾರೆ), 2) ಆರ್ಥಿಕತೆಯ ಸಮಗ್ರ ಕ್ಷೇತ್ರಗಳಲ್ಲಿ ಸುಧಾರಣೆಗಳು ಹಾಗೂ ಆ ಮೂಲಕ ಖಾಸಗಿ ಕ್ಷೇತ್ರಕ್ಕೆ ಹೆಚ್ಚಿನ ಅವಕಾಶ ಮತ್ತು 3) ಮಾನವೀಯ ಮತ್ತು ದಯಾಳುವಾಗಿರುವ ‘ಕಾಳಜಿಯುಕ್ತ ಸಮಾಜ’.
ಆರೋಗ್ಯ
ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವಾರು ಆರೋಗ್ಯ ಯೋಜನೆಗಳನ್ನು ಘೋಷಿಸಿದ್ದಾರೆ. ಅವುಗಳ ಪೈಕಿ ಹೆಚ್ಚಿನವು ಪ್ರಸಕ್ತ ಚಾಲ್ತಿಯಲ್ಲಿರುವ ಕ್ಷಯ ಜಾಗೃತಿ, ಜನ್ ಔಷಧಿ ಮತ್ತು ಜನ್ ಆರೋಗ್ಯ ಯೋಜನೆ ಮುಂತಾದ ಕಾರ್ಯಕ್ರಮಗಳನ್ನು ಬಲಪಡಿಸುತ್ತವೆ.
ಸ್ವಚ್ಛ ಭಾರತ ಯೋಜನೆಗೆ 12,300 ಕೋಟಿ ರೂ.
ಸ್ವಚ್ಛ ಭಾರತ ಯೋಜನೆಗೆ 12,300 ಕೋಟಿ ರೂಪಾಯಿಯನ್ನು ಒದಗಿಸಲಾಗಿದೆ.
ಶಿಕ್ಷಣ/ಕೌಶಲ
ಶಿಕ್ಷಣ ಸಚಿವಾಲಯವು 99,300 ಕೋಟಿ ರೂಪಾಯಿ ಅನುದಾನ ಪಡೆಯಲಿದೆ. ಇದು ಹಾಲಿ ವರ್ಷದ ಬಜೆಟ್ 94,853 ಕೋಟಿ ರೂಪಾಯಿಗೆ ಹೋಲಿಸಿದರೆ ಸ್ವಲ್ಪ ಏರಿಕೆಯಾಗಿದೆ.
ಇನ್‌ಟರ್ನ್‌ಶಿಪ್
ಸರಕಾರವು ಹೊಸ ಇಂಜಿನಿಯರಿಂಗ್ ಪದವೀಧರರಿಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಂದು ವರ್ಷದ ಇನ್‌ಟರ್ನ್‌ಶಿಪ್ ಒದಗಿಸಲಿದೆ ಎಂದು ನಿರ್ಮಲಾ ಘೋಷಿಸಿದರು. ಇದು ಅವರಿಗೆ ಉತ್ತಮ ಅನುಭವ ನೀಡುತ್ತದೆ ಹಾಗೂ ಉತ್ತಮ ಯೋಜನೆಗಳನ್ನು ರೂಪಿಸುವಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ ಎಂದರು.
3.8 ಶೇ. ವಿತ್ತೀಯ ಕೊರತೆ
‘‘ಲಭ್ಯವಿರುವ ಪ್ರವೃತ್ತಿಗಳ ಆಧಾರದಲ್ಲಿ, 2021ರ ಆರ್ಥಿಕ ವರ್ಷಕ್ಕಾಗಿ ಒಟ್ಟು ದೇಶಿ ಉತ್ಪನ್ನ (ಜಿಡಿಪಿ)ದಲ್ಲಿ ಅಲ್ಪ ಬೆಳವಣಿಗೆಯನ್ನು ನಾವು ಲೆಕ್ಕಹಾಕಿದ್ದೇವೆ. ಅದರ ಪ್ರಕಾರ, 2021ರ ಹಣಕಾಸು ವರ್ಷದ ಜಿಡಿಪಿಯನ್ನು 22.46 ಲಕ್ಷ ಕೋಟಿ ರೂಪಾಯಿ ಎಂದು ನಾವು ಅಂದಾಜಿಸಿದ್ದೇವೆ. ವಿವಿಧ ಯೋಜನೆಗಳಿಗೆ ಸರಕಾರದ ಬದ್ಧತೆಯನ್ನು ಗಣನೆಗೆ ತೆಗೆದುಕೊಂಡರೆ, ಖರ್ಚಿನ ಮಟ್ಟವು 30.42 ಲಕ್ಷ ಕೋಟಿ ರೂಪಾಯಿ ಆಗಿರುತ್ತದೆ’’ ಎಂದು ನಿರ್ಮಲಾ ಹೇಳಿದರು.
ಸರಕಾರದ ಎಲ್ಲ ಪ್ರಮುಖ ಕಾರ್ಯಕ್ರಮಗಳಿಗೆ ಪೂರ್ಣ ಪ್ರಮಾಣದಲ್ಲಿ ಹಣ ಒದಗಿಸಲಾಗಿದೆ ಎಂದು ಹೇಳಿದ ಅವರು, ಇದರ ವಿವರಗಳನ್ನು ಬಜೆಟ್ ದಾಖಲೆಗಳಲ್ಲಿ ಪರಿಶೀಲಿಸುವಂತೆ ಜನರಿಗೆ ಸೂಚಿಸಿದ್ದಾರೆ.
‘‘ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಹೆಚ್ಚಳವಾಗಲು ಸಮಯ ತಗಲುತ್ತದೆ’’ ಎಂದು ಅವರು ಅಭಿಪ್ರಾಯಪಟ್ಟರು. ‘‘2020ರ ಆರ್ಥಿಕ ವರ್ಷದಲ್ಲಿ 3.8 ಶೇಕಡ ವಿತ್ತೀಯ ಕೊರತೆಯನ್ನು ನಾವು ಲೆಕ್ಕಹಾಕಿದ್ದೇವೆ ಹಾಗೂ 2021ರ ಹಣಕಾಸು ವರ್ಷಕ್ಕೆ ಇದು 3.5 ಶೇಕಡ ಆಗಿರುತ್ತದೆ’’ ಎಂದರು.
2020 ಹಣಕಾಸು ವರ್ಷಕ್ಕೆ ನಿವ್ವಳ ಮಾರುಕಟ್ಟೆ ಸಾಲ 4.99 ಲಕ್ಷ ಕೋಟಿ ರೂಪಾಯಿ ಹಾಗು 2021ರ ಹಣಕಾಸು ವರ್ಷಕ್ಕೆ ಅದು 5.36 ಲಕ್ಷ ಕೋಟಿ ರೂಪಾಯಿ ಆಗಿರುತ್ತದೆ.
ಕೃಷಿ ಆದಾಯ ದ್ವಿಗುಣಕ್ಕಾಗಿ 16 ಅಂಶಗಳ ಕ್ರಿಯಾಯೋಜನೆ
ರೈತರ ಆದಾಯ ದುಪ್ಪಟ್ಟು ಮಾಡುವ ಮೋದಿ ಸರಕಾರದ ಯೋಜನೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ 16 ಅಂಶಗಳ ಕ್ರಿಯಾ ಯೋಜನೆಯೊಂದನ್ನು ಸರಕಾರ ಸಿದ್ಧಪಡಿಸಿದೆ ಎಂದು ನಿರ್ಮಲಾ ಸೀತಾರಾಮನ್ ನುಡಿದರು.
ಇದಕ್ಕಾಗಿ ಸರಕಾರ ಏನು ಮಾಡಲಿದೆ ಎನ್ನುವುದನ್ನು ಅವರು ಹೀಗೆ ವಿವರಿಸಿದ್ದಾರೆ:
1) 2015ರ ಮಾದರಿ ಕೃಷಿ ಭೂಮಿ ಗುತ್ತಿಗೆ ಕಾಯ್ದೆ, ಮಾದರಿ ಕೃಷಿ ಉತ್ಪನ್ನ ಮತ್ತು ಮಾರುಕಟ್ಟೆ ಕಾಯ್ದೆ, ಮಾದರಿ ಕೃಷಿ ಜಾನುವಾರು ಪೂರೈಕೆ ಕಾಯ್ದೆ ಮುಂತಾದ ಮಾದರಿ ಕಾನೂನುಗಳನ್ನು ಜಾರಿಗೆ ತರುವ ರಾಜ್ಯ ಸರಕಾರಗಳಿಗೆ ಉತ್ತೇಜನ ನೀಡುವುದು.
2) ನೀರಿನ ಅಭಾವವಿರುವ 100 ಜಿಲ್ಲೆಗಳಿಗೆ ಪರಿಹಾರ ಕ್ರಮಗಳನ್ನು ಸರಕಾರ ರೂಪಿಸುತ್ತಿದೆ.
3) ‘ಅನ್ನದಾತ ವಿದ್ಯುತ್‌ದಾತನೂ ಆಗಬಹುದು’. ಕುಸುಮ ಯೋಜನೆಯಲ್ಲಿ ನೀರಾವರಿ ಪಂಪ್‌ಸೆಟ್‌ಗಳನ್ನು ಸೌರ ವಿದ್ಯುತ್‌ಗೆ ಜೋಡಿಸುವುದು. ಈ ಯೋಜನೆಯನ್ನು ಸರಕಾರ ವಿಸ್ತರಿಸಿ, 20 ಲಕ್ಷ ರೈತರಿಗೆ ಸೌರ ವಿದ್ಯುತ್ ಚಾಲಿತ ಪಂಪ್‌ಸೆಟ್‌ಗಳನ್ನು ಪೂರೈಸಲಿದೆ. ಈ ಯೋಜನೆಯಡಿ, ಪಾಳು ಬಿದ್ದಿರುವ ಮತ್ತು ಬರಡು ಭೂಮಿಗಳಲ್ಲಿ ಬೆಳೆಗಳನ್ನು ಬೆಳೆಯಲು ಸರಕಾರವು ರೈತರಿಗೆ ಸೌರಚಾಲಿತ ಪಂಪ್‌ಸೆಟ್‌ಗಳನ್ನು ಒದಗಿಸಲಿದೆ. ‘‘ಈ ಮೂಲಕ, ಬರಡು ಭೂಮಿಗಳಿಂದಲೂ ರೈತರು ಜೀವನೋಪಾಯ ಗಳಿಸಬಹುದು’’.
4) ಈಗಿನ ವ್ಯವಸ್ಥೆಯು ರಾಸಾಯನಿಕ ಗೊಬ್ಬರಗಳ ಅತಿ ಬಳಕೆಗೆ ಉತ್ತೇಜನ ನೀಡುತ್ತದೆ. ರಸಗೊಬ್ಬರಗಳನ್ನು ಅತಿಯಾಗಿ ಬಳಸದಂತೆ ಈ ಯೋಜನೆಯು ರೈತರನ್ನು ಉತ್ತೇಜಿಸುತ್ತದೆ.
5) ಧಾನ್ಯಗಳ ಕೊರತೆಯಿರುವ ಉಗ್ರಾಣಗಳನ್ನು ಜಿಯೋ-ಟ್ಯಾಗ್ (ಸ್ಥಳಗಳನ್ನು ಗುರುತಿಸುವ ವ್ಯವಸ್ಥೆ) ಮಾಡಲು ನಬಾರ್ಡ್ ಕ್ರಮಗಳನ್ನು ತೆಗೆದುಕೊಳ್ಳಲಿದೆ.
6) ಮಹಿಳಾ ಸ್ವಸಹಾಯ ಗುಂಪುಗಳಿಂದ ನಡೆಸಲ್ಪಡುವ ಗ್ರಾಮ ಉಗ್ರಾಣ ಯೋಜನೆ. ಈ ಸ್ವಸಹಾಯ ಗುಂಪುಗಳು ‘ಧಾನ್ಯ ಲಕ್ಷ್ಮಿ’ಯನ್ನು ನಡೆಸಲು ಮುದ್ರಾ ಮತ್ತು ನಬಾರ್ಡ್ ನೆರವನ್ನು ಪಡೆದುಕೊಳ್ಳಬಹುದು.
7) ಬೇಗ ಹಾಳಾಗುವ ಸರಕುಗಳನ್ನು ಸುಲಭವಾಗಿ ಮತ್ತು ವೇಗವಾಗಿ ಸಾಗಿಸಲು ಸಾಧ್ಯವಾಗುವಂತೆ ಭಾರತೀಯ ರೈಲ್ವೇಯು ‘ಕಿಸಾನ್ ರೈಲ’ನ್ನು ಸ್ಥಾಪಿಸಲಿದೆ.
8) ನಾಗರಿಕ ವಿಮಾನಯಾನ ಸಚಿವಾಲಯದ ‘ಕಿಸಾನ್ ಉಡಾನ್’ ಯೋಜನೆಯು ವೌಲ್ಯ ವರ್ಧನೆಗೆ ನೆರವು ನೀಡಲಿದೆ.
9) ಆರ್ಥಿಕ ವರ್ಷ 2021ರ ಕೃಷಿ ಸಾಲ ಗುರಿಯನ್ನು 15 ಲಕ್ಷ ಕೋಟಿಗೆ ನಿಗದಿಪಡಿಸಲಾಗಿದೆ. ಎಲ್ಲ ಅರ್ಹ ಪಿಎಮ್-ಕಿಸಾನ್ ಫಲಾನುಭವಿಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ.
10) ಮಳೆ ಆಧಾರಿತ ಪ್ರದೇಶಗಳಲ್ಲಿನ ಸಮಗ್ರ ಕೃಷಿ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತದೆ. ಶೂನ್ಯ ಬಜೆಟ್ ಸಹಜ ಕೃಷಿಯನ್ನು ಮುಂದುವರಿಸಲಾಗುತ್ತದೆ.
11) ನೆಗೋಶಿಯಬಲ್ ವೇರ್‌ಹೌಸಿಂಗ್ ರಿಸೀಪ್ಟ್‌ಗೆ ಸಂಬಂಧಿಸಿದ ಹಣಕಾಸು ವ್ಯವಹಾರವನ್ನು ‘ಇನಾಮ್’ ಜೊತೆ ಜೋಡಿಸಲಾಗುವುದು.
12) ಕೃಷಿ ಸಾಲದಲ್ಲಿ ಹೆಚ್ಚಳ. ಎಲ್ಲ ಪಿಎಮ್ ಕಿಸಾನ್ ಫಲಾನುಭವಿಗಳಿಗೆ ಕೆಸಿಸಿ ನೀಡಲಾಗುವುದು.
13) 2025ರ ವೇಳೆಗೆ ಜಾನುವಾರುಗಳ ಕಾಲು ಮತ್ತು ಬಾಯಿ ರೋಗ ಮತ್ತು ಪಿಪಿಆರ್ ನಿರ್ಮೂಲನ.
14) ನೀಲಿ ಆರ್ಥಿಕತೆ: ಸಮುದ್ರ ಮೀನುಗಾರಿಕೆಯ ಅಭಿವೃದ್ಧಿ ಮತ್ತು ನಿರ್ವಹಣೆಗೆ ರೂಪುರೇಷೆ.
15)2023ರ ವೇಳೆಗೆ ಆಹಾರ ಉತ್ಪಾದನೆ 200 ಲಕ್ಷ ಟನ್‌ಗಳಿಗೆ ಏರಿಕೆ. ಪಾಚಿ ಮತ್ತು ಸಮುದ್ರಕಳೆ ಬೆಳೆಯಲು ಮತ್ತು ಬಲೆಯೊಳಗೆ ಮೀನು ಸಾಕಣೆ (ಕೇಜ್ ಕಲ್ಚರ್)ಗೆ ಉತ್ತೇಜನ.
16)ಗ್ರಾಮೀಣ ಯವಕರಿಗೆ ಕೆಲಸ ನೀಡುವುದಕ್ಕಾಗಿ ಸರಕಾರವು ಸಾಗರ ಮಿತ್ರರು ಮತ್ತು ಕೃಷಿ ಉತ್ಪನ್ನ ಘಟಕಗಳನ್ನು ಸ್ಥಾಪಿಸಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸಂಸತ್ತಿನಲ್ಲಿ ಮಂಡಿಸಿದ 2020-21ನೆ ಸಾಲಿನ ಕೇಂದ್ರ ಬಜೆಟ್‌ನ ಮುಖ್ಯಾಂಶಗಳು
*5ರಿಂದ 7.5 ಲಕ್ಷ ರೂ. ಆದಾಯಕ್ಕೆ ಶೇ.10ರಷ್ಟು ತೆರಿಗೆ
*7.5 ರಿಂದ 10 ಲಕ್ಷ ರೂ. ಆದಾಯಕ್ಕೆ ಶೇ.15ರಷ್ಟು ತೆರಿಗೆ
*10ರಿಂದ 12.5 ಲಕ್ಷ ರೂ. ಆದಾಯಕ್ಕೆ ಶೇ.20ರಷ್ಟು ತೆರಿಗೆ
*12.5ರಿಂದ 15 ಲಕ್ಷ ರೂ. ಆದಾಯಕ್ಕೆ ಶೇ.25ರಷ್ಟು ತೆರಿಗೆ
*15 ಲಕ್ಷ ರೂ.ಗಿಂತ ಮೇಲ್ಪಟ್ಟ ಆದಾಯಕ್ಕೆ ಶೇ.30 ರಷ್ಟು ತೆರಿಗೆ ವಿಧಿಸಲಾಗಿದೆ.
*ಬ್ಯಾಂಕ್ ಠೇವಣಿದಾರರ ವಿಮೆ 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಕೆ
*ಎಲ್‌ಐಸಿಯಲ್ಲಿರುವ ಸರಕಾರಿ ಹೂಡಿಕೆಯಲ್ಲಿ ಅಲ್ಪ ಪಾಲು ಮಾರಾಟ
*ಎಲ್‌ಐಸಿಯಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ
*ಐಡಿಬಿಐ ಬ್ಯಾಂಕ್ ಸಂಪೂರ್ಣ ಖಾಸಗೀಕರಣ
*ಕೈಗೆಟುಕುವ ದರದ ವಸತಿ ಯೋಜನೆಗೆ ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ವಿನಾಯಿತಿ ಲಾಭವನ್ನು ಇನ್ನೂ ಒಂದು ವರ್ಷದ ಅವಧಿಗೆ ವಿಸ್ತರಣೆ. ವಸತಿ ಯೋಜನೆ ನಿರ್ವಹಿಸುವ ಕಂಪೆನಿಗಳಿಗೆ ತಡವಾಗಿ ತೆರಿಗೆ ಪಾವತಿಸಲು ಅವಕಾಶ.
*ಉತ್ತರಪ್ರದೇಶ, ಗುಜರಾತ್, ಹರ್ಯಾಣ, ಅಸ್ಸಾಂ, ತಮಿಳುನಾಡು ರಾಜ್ಯಗಳ ಐದು ಪುರಾತತ್ವ ಸ್ಥಳಗಳನ್ನು ಐತಿಹಾಸಿಕ ಸ್ಥಳಗಳಾಗಿ ಬೆಳೆಸಲಾಗುವುದು.
*ಪ್ರವಾಸೋದ್ಯಮ ಇಲಾಖೆಗೆ 2500 ಕೋ.ರೂ. ಮೀಸಲು
*ಕಾಶ್ಮೀರ ಹಾಗೂ ಲಡಾಖ್ ಅಭಿವೃದ್ದಿಗೆ ಪ್ರತ್ಯೇಕ ಅನುದಾನ
* 3.50 ಲಕ್ಷ ಕೋಟಿ ಸಾರ್ವಜನಿಕ ಬ್ಯಾಂಕ್‌ಗಳಿಗೆ ಅನುದಾನ
*10 ಬ್ಯಾಂಕ್‌ಗಳನ್ನು ವಿಲೀನಗೊಳಿಸಿ 4 ಬ್ಯಾಂಕ್ ಮಾಡಿದ್ದೇವೆ
* ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುವವರು ಭಯಪಡುವ ಅಗತ್ಯವಿಲ್ಲ
*ಗರ್ಭಿಣಿಯರ ಸಾವು ತಡೆಗೆ ಹೊಸ ಟಾಸ್ಕ್ ಫೋರ್ಸ್
*ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 28,600 ಕೋಟಿ ರೂ.
*ಎಸ್ಸಿ, ಒಬಿಸಿ ಸಮುದಾಯಗಳಿಗೆ 85 ಸಾವಿರ ಕೋಟಿ ರೂ.
*ಹಿರಿಯ ನಾಗರಿಕರಿಗಾಗಿ 9,000 ಕೋಟಿ ರೂ.
*ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ 53,700 ಕೋಟಿ ರೂ.
*6 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಣೆ
*ಗರ್ಭಿಣಿಯರ ಸಾವು ತಡೆಗಟ್ಟಲು ಹೊಸ ಟಾಸ್ಕ್‌ಫೋರ್ಸ್
*9 ಸಾವಿರ ಕಿ.ಮೀ. ಆರ್ಥಿಕ ಕಾರಿಡಾರ್
*ಅಂಗನವಾಡಿಗೂ ಇಂಟರ್‌ನೆಟ್ ಸೌಲಭ್ಯ
*1 ಲಕ್ಷ ಗ್ರಾಮಗಳಿಗೆ ಫೈಬರ್ ನೆಟ್ ಸೌಲಭ್ಯ
*ಭಾರತ ನೆಟ್ ಯೋಜನೆಗೆ 6000 ಕೋ.ರೂ.ಯೋಜನೆ
*ಒಂದು ಲಕ್ಷ ಗ್ರಾಮ ಪಂಚಾಯತ್ ಗಳಿಗೆ ಫೈಬರ್ ನೆಟ್ ಸೌಲಭ್ಯ
*2022ರೊಳಗೆ 100 ಹೊಸ ವಿಮಾನ ನಿಲ್ದಾಣಗಳ ಅಭಿವೃದ್ಧಿ
*2023ರೊಳಗೆ ದಿಲ್ಲಿ - ಮುಂಬೈ ಎಕ್ಸ್ ಪ್ರೆಸ್ ವೇ, ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ವೇ
*ಶಿಕ್ಷಣದಲ್ಲೂ ವಿದೇಶಿ ಬಂಡವಾಳ ಹೂಡಿಕೆಗೆ ಕ್ರಮ
* ಹೊಸ ಶಿಕ್ಷಣ ನೀತಿ ಶೀಘ್ರವೇ ಘೋಷಣೆ
*ಜಲ ಜೀವನ ಮಿಷನ್‌ಗೆ 3.6 ಲಕ್ಷ ಕೋ ರೂ ಅನುದಾನ
* ಸ್ಥಳೀಯ ಸಂಸ್ಥೆಗಳಲ್ಲಿ ಇಂಜಿನಿಯರ್ ಪದವೀಧರರಿಗೆ ತರಬೇತಿ
*ನೈಸರ್ಗಿಕ ಕೃಷಿಗಾಗಿ ರಾಷ್ಟ್ರೀಯ ಮಾರುಕಟ್ಟೆ
*ಕೃಷಿ ಸಾಲಕ್ಕಾಗಿ ನಬಾರ್ಡ್‌ಗೆ 15 ಲಕ್ಷ ಕೋಟಿ ರೂ. ಘೋಷಣೆ
*ಮಹಿಳಾ ರೈತರಿಗಾಗಿ ಧಾನ್ಯ ಲಕ್ಷ್ಮೀ ಯೋಜನೆ
*ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಪ್ರಸ್ತಾವನೆ
* ನರೇಗಾ ಯೋಜನೆಯಡಿ ಜೇನುಕೃಷಿಗೆ ಉತ್ತೇಜನ
*ಕೃಷಿ ಉತ್ಪನ್ನಗಳಿಗಾಗಿ ಇ-ಮಾರುಕಟ್ಟೆ ಯೋಜನೆ
* 500 ಮೀನು ಉತ್ಪಾದಕರ ಸಂಘ ಸ್ಥಾಪನೆ
* ‘ಸಾಗರ ಮಿತ್ರಾ’ ಯೋಜನೆಯಡಿ ಮತ್ಸೋದ್ಯಮಕ್ಕೆ ಉತ್ತೇಜನ
*12 ರೋಗಗಳಿಗಾಗಿ ಮಿಷನ್ ಇಂದ್ರಧನುಷ್ ಯೋಜನೆ
*ಕೃಷಿ, ಗ್ರಾಮೀಣ ಜೀವನ ಅಭಿವೃದ್ಧಿಗೆ 16 ಅಂಶಗಳ ಯೋಜನೆ ಪ್ರಕಟ
*ನೀರಾವರಿ ಯೋಜನೆಗಳಿಗೆ 100 ಜಿಲ್ಲೆಗಳ ಆಯ್ಕೆ
*ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಸರಕಾರದಿಂದ ಕ್ರಮ
*ಬರಡು ಭೂಮಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಯೋಜನೆ
*20 ಲಕ್ಷ ರೈತರಿಗೆ ಸೋಲಾರ್ ಪಂಪ್‌ಸೆಟ್ ಗಳ ವಿತರಣೆ
*ಕುಸುಮ್ ಯೋಜನೆ ವಿಸ್ತರಣೆ
*ಆಯುಷ್ಮಾನ್ ಯೋಜನೆ ಅಡಿ 112 ಜಿಲ್ಲೆಗಳಲ್ಲಿ ಹೊಸ ಆಸ್ಪತ್ರೆ
*ಕೌಶಲ್ಯಾಭಿವೃದ್ಧಿಗೆ 3,000 ಕೋಟಿ ರೂ.
*ರಾಷ್ಟ್ರೀಯ ತಾಂತ್ರಿಕ ಜವಳಿ ಯೋಜನೆ ಘೋಷಣೆ
*ಪಿಪಿಪಿ ಯೋಜನೆಯಡಿ 5 ಸ್ನಾರ್ಟ್ ಸಿಟಿಗಳ ನಿರ್ಮಾಣ
*ಸ್ಟಡಿ ಇನ್ ಇಂಡಿಯಾ ಯೋಜನೆ
*2 ಮಹಿಳಾ ಸ್ವಸಹಾಯ ಸಂಘಗಳ ಯೋಜನೆ
*ಸೌಲಭ್ಯವಂಚಿತ ವಿದ್ಯಾರ್ಥಿಗಳಿಗೆ ಆನ್ ಲೈನ್ ಕೋರ್ಸ್ ಗಳು
*ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದ ಬೆಳವಣಿಗೆ ಮತ್ತು ಉತ್ತೇಜನಕ್ಕೆ 27,300 ಕೋಟಿ ರೂ.
*ಪ್ರತಿ ಜಿಲ್ಲೆಯನ್ನೂ ರಫ್ತು ಕೇಂದ್ರವನ್ನಾಗಿಸಲು ಯೋಜನೆ
*ಶಿಕ್ಷಣ ಕ್ಷೇತ್ರಕ್ಕೆ 99,300 ಕೋಟಿ ರೂ. ಮೀಸಲು
*ರಾಷ್ಟ್ರೀಯ ಪೊಲೀಸ್ ವಿವಿ ಸ್ಥಾಪನೆ
*ಜಲ್ ಜೀವನ್ ಮಿಷನ್ ಗಾಗಿ 11,500 ಕೋಟಿ ರೂ. ಮೀಸಲು
*ಸ್ವಚ್ಛ ಭಾರತ್ ಯೋಜನೆಗೆ 12,300 ಕೋಟಿ ರೂ.
*ಕೃಷಿಗೆ 1.6 ಲಕ್ಷ ಕೋಟಿ ರೂ. ಮೀಸಲು
*ರಫ್ತು ಉತ್ತೇಜನಕ್ಕೆ ‘ನಿರ್ವಿಕ್’ ಯೋಜನೆ ಹಾಗೂ ತೆರಿಗೆ ಕಡಿತ ಮಾದರಿ ಜಾರಿ
*ನ್ಯಾಶನಲ್ ಟೆಕ್ನಿಕಲ್ ಟೆಕ್ಸ್‌ಟೈಲ್ಸ್ ಮಿಷನ್ ಘೋಷಣೆ
*ಮೂಲಸೌಕರ್ಯಕ್ಕೆ ಮುಂದಿನ 5 ವರ್ಷಕ್ಕೆ 103 ಲಕ್ಷ ಕೋಟಿ ಅನುದಾನ







