ದೀರ್ಘ ಸಮಯ ಬಜೆಟ್ ಭಾಷಣ ಮಾಡಿ ದಾಖಲೆ ನಿರ್ಮಿಸಿದ ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ, ಫೆ.1: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2020-21ರ ಕೇಂದ್ರ ಬಜೆಟ್ ಮಂಡನೆ ವೇಳೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘ ಸಮಯ ಭಾಷಣ ಮಾಡಿದ ಹೆಗ್ಗಳಿಕೆಗೆ ಪಾತ್ರರಾದರು.
ಸೀತಾರಾಮನ್ ಶನಿವಾರ ಬೆಳಗ್ಗೆ 11 ಗಂಟೆಗೆ ಬಜೆಟ್ ಭಾಷಣ ಆರಂಭಿಸಿದರು. ಮಧ್ಯಾಹ್ನ 1:40ಕ್ಕೆ ಭಾಷಣ ಮುಗಿಸಿದರು. ಈಮೂಲಕ 2 ಗಂಟೆ, 40 ನಿಮಿಷಗಳ ಕಾಲ ಬಜೆಟ್ ಮುಖ್ಯಾಂಶಗಳನ್ನು ಓದಿದರು. ಕೇವಲ ಎರಡು ಪುಟಗಳು ಬಾಕಿ ಇರುವಾಗ ದಣಿದಂತೆ ಕಂಡುಬಂದ ನಿರ್ಮಲಾ ಬೇಗನೆ ಬಜೆಟ್ ಓದಿ ಮುಗಿಸಲು ಮುಂದಾದರು. ನಾನು ಉಳಿದ ಪುಟಗಳನ್ನು ಓದಿದ್ದೇನೆಂದು ಪರಿಗಣಿಸುವಂತೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ನಿರ್ಮಲಾ ಮನವಿ ಮಾಡಿಕೊಂಡು ದಾಖಲೆ 160 ನಿಮಿಷಗಳ ಬಜೆಟ್ ಭಾಷಣವನ್ನು ಮುಗಿಸಿದರು.
ದೇಶದ ಮೊತ್ತ ಮೊದಲ ಪೂರ್ಣಕಾಲಿಕ ವಿತ್ತ ಸಚಿವೆಯಾಗಿರುವ ನಿರ್ಮಲಾ 2019ರಲ್ಲಿ ತಾನು ಮಂಡಿಸಿರುವ ಮೊದಲ ಬಜೆಟ್‌ನಲ್ಲಿ 2 ಗಂಟೆ, 17 ನಿಮಿಷ ಭಾಷಣ ಮಾಡಿದ್ದರು. 2003ರಲ್ಲಿ 2 ಗಂಟೆ, 15 ನಿಮಿಷ ಬಜೆಟ್ ಭಾಷಣ ಮಾಡಿದ್ದ ಜಸ್ವಂತ್ ಸಿಂಗ್ ದಾಖಲೆಯನ್ನು ಮುರಿದಿದ್ದರು.
Next Story





