ಕೃಷಿ ಕ್ಷೇತ್ರಕ್ಕೆ ನಿರಾಸೆ ತಂದ ಬಜೆಟ್: ಕುರುಬೂರು ಶಾಂತಕುಮಾರ್

ಬೆಂಗಳೂರು, ಫೆ.1: ಕೇಂದ್ರ ಸರಕಾರದ ಬಜೆಟ್‌ನಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ರೈತರ ಆದಾಯ ದ್ವಿಗುಣಗೊಳಿಸಲು ಯಾವುದೇ ಸ್ಪಷ್ಟ ಯೋಜನೆಗಳು ಪ್ರಕಟವಾಗಿಲ್ಲ. ಕಳೆದ ನಾಲ್ಕು ವರ್ಷದಿಂದಲೂ ಇದೇ ಪ್ರಸ್ತಾಪವನ್ನು ಮುಂದುವರೆಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರಿಗೆ ಬೇಕಾದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಕೃಷಿ ಸಾಲ ನೀತಿ ಬಗ್ಗೆ ಯಾವುದೇ ಯೋಜನೆಗಳಿಲ್ಲ. ರೈತರಿಗೆ ಈ ಬಜೆಟ್ ನಿರಾಸೆ ತಂದಿದೆ. ಫಸಲ್ ಬಿಮಾ ಯೋಜನೆ ತಿದ್ದುಪಡಿಯಾಗಿ ಜಾರಿಗೆ ಬರದಿದ್ದರೆ ಯಾವುದೇ ಪ್ರಯೋಜನವು ರೈತರಿಗೆ ಆಗುವುದಿಲ್ಲ ಎಂದರು. ಕೃಷಿ ಕ್ಷೇತ್ರಕ್ಕೆ ನೀಡುತ್ತಿದ್ದ ಸಾಲದ ಮೊತ್ತವನ್ನು 12 ಲಕ್ಷ ಕೋಟಿ ರೂ.ಗಳಿಂದ 15 ಲಕ್ಷ ಕೋಟಿ ರೂ.ಗಳಿಗೆ ಏರಿಕೆ ಮಾಡಿರುವುದು ಸರಿಯಷ್ಟೇ. ಆದರೆ, ಸಾಲ ನೀತಿ ಬದಲಾಯಿಸದಿದ್ದರೆ ರೈತರ ಹೆಸರಿನಲ್ಲಿ ಕೃಷಿ ಉಪಕರಣ ತಯಾರು ಮಾಡುವ ಕಂಪೆನಿಗಳು ಹೆಚ್ಚು ಭಾಗ ಬಳಸಿಕೊಂಡು ರೈತರಿಗೆ ಪಂಗನಾಮ ಹಾಕುವಂತಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ದೇಶದ ಜನಸಂಖ್ಯೆಯ ಶೇ. 70ರಷ್ಟು ರೈತರು ಇದ್ದು. ಒಟ್ಟು ಬಜೆಟ್ ಹಣದಲ್ಲಿ 2 ಲಕ್ಷ 83 ಸಾವಿರ ಕೋಟಿ ರೂ.ಅನುದಾನ ನೀಡಿರುವುದು ಸರಿಯಲ್ಲ. ಕನಿಷ್ಠ 10 ಲಕ್ಷ ಕೋಟಿ ರೂ.ಗಳನ್ನು ಒದಗಿಸಬೇಕಿತ್ತು ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಧನಲಕ್ಷ್ಮಿ ಯೋಜನೆ ಮೂಲಕ ಧಾನ್ಯಗಳ ಮಾರಾಟ ಪ್ರಕ್ರಿಯೆಗೆ ಯೋಜನೆ ರೂಪಿಸಿರುವುದು, ಬರಡು ಭೂಮಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಿರುವುದು ಒಳ್ಳೆಯ ಯೋಜನೆಗಳಾಗಿವೆ. ರೈತರ ಉತ್ಪನ್ನಗಳ ಸಾಗಾಣಿಕೆಗೆ ಕೃಷಿ ಉಡಾನ್ ಯೋಜನೆ ಜಾರಿಗೆ ತಂದಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಶಂಕರಗೌಡ ಎನ್. ಹೊಸಗೌಡ್ರ, ಮಾರುತಿ ನಲವಡೆ, ನಾಗಪ್ಪ ಆರ್ಯರ್, ಕೆಂಚಾನಾಯಕ ಪಾಟೀಲ್ ಹಾಗೂ ರಾಜ್ಯ ಉಪಾಧ್ಯಕ್ಷ ಸುರೇಶ್ ಮ.ಪಾಟೀಲ್ ಉಪಸ್ಥಿತರಿದ್ದರು.







