ಬಜೆಟ್: ಕ್ರೀಡಾ ಕ್ಷೇತ್ರಕ್ಕೆ 2826.92 ಕೋಟಿ ಅನುದಾನ

ಹೊಸದಿಲ್ಲಿ, ಫೆ.1: ಮುಂದಿನ ಆರ್ಥಿಕ ವರ್ಷಕ್ಕೆ 2826.92 ಕೋಟಿ ರೂ. ಕ್ರೀಡಾಬಜೆಟ್ ನಿಗದಿಗೊಳಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಸರಕಾರ ಕ್ರೀಡಾಕ್ಷೇತ್ರಕ್ಕೆ ಹೆಚ್ಚುವರಿ 50 ಕೋಟಿ ರೂ. ಅನುದಾನ ಒದಗಿಸಿದೆ.
‘ಖೇಲೊ ಇಂಡಿಯಾ’ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ ಭರ್ಜರಿ ಅನುದಾನ ಲಭಿಸಿದೆ. ಕಳೆದ ಬಜೆಟ್‌ಗಿಂತ ಹೆಚ್ಚುವರಿ 312.42 ಕೋಟಿ ರೂ. ಅನುದಾನ ನೀಡಲಾಗಿದ್ದು 890.42 ಕೋಟಿ ರೂ. ಅನುದಾನ ನಿಗದಿಯಾಗಿದೆ. ಕಳೆದ ವರ್ಷ 578 ಕೋಟಿ ರೂ. ಪರಿಷ್ಕೃತ ಅನುದಾನ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕ್ರೀಡಾಕ್ಷೇತ್ರದ ಇತರ ವಿಭಾಗಗಳಿಗೆ ಅನುದಾನ ಕಡಿಮೆಯಾಗಲಿದೆ. ರಾಷ್ಟ್ರೀಯ ಕ್ರೀಡಾ ಒಕ್ಕೂಟಕ್ಕೆ ಕಳೆದ ಬಾರಿಗಿಂತ 55 ಕೋಟಿ ರೂ. ಕಡಿಮೆ ಅನುದಾನ ಒದಗಿಸಲಾಗಿದ್ದು 245 ಕೋಟಿ ರೂ. ಅನುದಾನ ನಿಗದಿಗೊಳಿಸಲಾಗಿದೆ.
ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡಲು ನಿಗದಿಯಾಗಿರುವ ಅನುದಾನವನ್ನೂ 41 ಕೋಟಿ ರೂ. ಕಡಿಮೆಗೊಳಿಸಲಾಗಿದ್ದು 70 ಕೋಟಿ ರೂ. ಅನುದಾನ ನಿಗದಿಯಾಗಿದೆ. ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿಗೆ ನೀಡುವ ಅನುದಾನವನ್ನೂ (ಈ ಹಿಂದೆ 77.15 ಕೋಟಿ ರೂ.) 50 ಕೋಟಿ ರೂ.ಗೆ ನಿಗದಿಗೊಳಿಸಲಾಗಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ(ಎಸ್‌ಎಐ)ಗೂ ಕಡಿಮೆ ಅನುದಾನ ನಿಗದಿಗೊಳಿಸಲಾಗಿದ್ದು 500 ಕೋಟಿ ರೂ.(ಕಳೆದ ಬಾರಿ 615 ಕೋಟಿ ರೂ) ನಿಗದಿಯಾಗಿದೆ. ಎಸ್‌ಎಐ ರಾಷ್ಟ್ರೀಯ ಕ್ರೀಡಾ ಶಿಬಿರದ ವ್ಯವಸ್ಥಾಪನೆ, ಮೂಲಸೌಕರ್ಯ ಒದಗಿಸುವುದು, ಕ್ರೀಡಾ ಸಾಧನ , ಕ್ರೀಡಾಪಟುಗಳ ಪ್ರಯಾಣ ವ್ಯವಸ್ಥೆ ಇತ್ಯಾದಿಗಳ ನಿರ್ವಹಣೆ ನಡೆಸುವ ನೋಡಲ್ ಸಂಸ್ಥೆಯಾಗಿದೆ .
2010ರ ಕಾಮನ್‌ವೆಲ್ತ್ ಕ್ರೀಡಾಕೂಟದ ಸಂದರ್ಭ ದಿಲ್ಲಿಯಲ್ಲಿರುವ ಎಸ್‌ಎಐ ಕ್ರೀಡಾಂಗಣದ ನವೀಕರಣ ಕಾರ್ಯದ ಅನುದಾನವನ್ನು 75 ಕೋಟಿ ರೂ.ಗೆ ಇಳಿಸಲಾಗಿದೆ(ಕಳೆದ ವರ್ಷ 96 ಕೋಟಿ ರೂ.). ಕ್ರೀಡಾಪಟುಗಳಿಗಾಗಿನ ರಾಷ್ಟ್ರೀಯ ಕಲ್ಯಾಣ ನಿಧಿಗೆ ಈ ಹಿಂದಿನಂತೆಯೇ 2 ಕೋಟಿ ಅನುದಾನ ನಿಗದಿಯಾಗಿದ್ದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರೀಡಾಸೌಲಭ್ಯ ಹೆಚ್ಚಿಸುವ ಅನುದಾನವನ್ನೂ ಈ ಹಿಂದಿನಂತೆಯೇ 50 ಕೋಟಿ ರೂ.ಗೆ ನಿಗದಿಗೊಳಿಸಲಾಗಿದೆ. ಲಕ್ಷ್ಮೀಬಾ ನ್ಯಾಷನಲ್ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆಗೆ ಕಳೆದ ವರ್ಷಕ್ಕಿಂತ 5 ಕೋಟಿ ರೂ. ಅಧಿಕ ಅನುದಾನ ಒದಗಿಸಿ 55 ಕೋಟಿ ರೂ.ಗೆ ನಿಗದಿಗೊಳಿಸಲಾಗಿದೆ. 2019-20ರ ಬಜೆಟ್‌ನಲ್ಲಿ ಕ್ರೀಡಾಕ್ಷೇತ್ರಕ್ಕೆ 2216.92 ಕೋಟಿ ರೂ. ಒದಗಿಸಲಾಗಿದ್ದರೂ ಬಳಿಕ ಈ ಮೊತ್ತವನ್ನು ಪರಿಷ್ಕರಿಸಿ 2776.92 ಕೋಟಿ ರೂ.ಗೆ ನಿಗದಿಗೊಳಿಸಲಾಗಿತ್ತು.







