ಹೊಸ ತೆರಿಗೆ ನಿಯಮ ಕಡ್ಡಾಯವಲ್ಲ: ಆಯ್ಕೆಯ ಅವಕಾಶ ನೀಡಿದ ಸರಕಾರ

ಹೊಸದಿಲ್ಲಿ, ಫೆ.1: ಬಜೆಟ್ ನಲ್ಲಿ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಘೋಷಿಸಲಾಗಿರುವ ಹೊಸ ತೆರಿಗೆ ಪದ್ಧತಿ ನಿಯಮ ಕಡ್ಡಾಯವಲ್ಲ. ತೆರಿಗೆ ಪಾವತಿದಾರರು ಈ ಹಿಂದಿನ ತೆರಿಗೆ ಪದ್ಧತಿಯನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಹೊಸ ತೆರಿಗೆ ಶ್ರೇಣಿ ಮತ್ತು ದರವನ್ನು ಆಯ್ಕೆ ಮಾಡಿಕೊಳ್ಳುವ ತೆರಿಗೆ ಪಾವತಿದಾರರು 50,000 ರೂ.ವರೆಗಿನ ಪ್ರಮಾಣಿತ ಕಡಿತ( ಸ್ಟಾಂಡರ್ಡ್ ಡಿಡಕ್ಷನ್), ಮಕ್ಕಳ ಟ್ಯೂಷನ್ ಫೀ, ವಿಮಾ ಕಂತು ಪಾವತಿ, ಪ್ರಾವಿಡೆಂಟ್ ಫಂಡ್ ಪಾವತಿ ಮುಂತಾದ ವಿನಾಯಿತಿ ಮತ್ತು ಕಡಿತಗಳನ್ನು ತ್ಯಜಿಸಬೇಕಾಗುತ್ತದೆ.
ಈಗ ಇರುವ (ವಿನಾಯಿತಿ ಮತ್ತು ಕಡಿತ ಒಳಗೊಂಡಿರುವ ) ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವ ಅವಕಾಶ ತೆರಿಗೆ ಪಾವತಿದಾರರಿಗಿದೆ. ಹೊಸ ತೆರಿಗೆ ಪ್ರಸ್ತಾವದ ಪ್ರಕಾರ 2.5 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯ ಹೊಂದಿರುವವರು ಯಾವುದೇ ತೆರಿಗೆ ಪಾವತಿಸಬೇಕಿಲ್ಲ. 2.5 ಲಕ್ಷದಿಂದ 5 ಲಕ್ಷ ರೂ.ವರೆಗಿನ ಆದಾಯಕ್ಕೆ ಈ ಹಿಂದೆ 5% ತೆರಿಗೆ ಪಾವತಿಸಬೇಕಿದೆ. ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡುವ ವೈಯಕ್ತಿಕ ತೆರಿಗೆ ಪಾವತಿದಾರರು ಆದಾಯ ತೆರಿಗೆಯ ಸೆಕ್ಷನ್ 80ಸಿ ಯಡಿ ಯಾವುದೇ ಕಡಿತಕ್ಕೆ ಅರ್ಹನಾಗುವುದಿಲ್ಲ. ಅಲ್ಲದೆ ಸೆಕ್ಷನ್ 80 ಸಿಸಿಸಿ( ಕೆಲವು ಪೆನ್ಷನ್ ಫಂಡ್‌ಗೆ ವಂತಿಗೆ), ಸೆಕ್ಷನ್ 80 ಡಿ(ಉನ್ನತ ಶಿಕ್ಷಣ ಸಾಲದ ಮೇಲಿನ ಬಡ್ಡಿ), ಸೆಕ್ಷನ್ 80 ಇಇ(ವಸತಿ ಆಸ್ತಿ ಸಾಲದ ಮೇಲಿನ ಬಡ್ಡಿ), ಸೆಕ್ಷನ್ 80 ಇಇಬಿ(ಇಲೆಕ್ಟ್ರಿಕ್ ವಾಹನ ಖರೀದಿ), ಸೆಕ್ಷನ್ 80 ಜಿ( ದತ್ತಿ ಸಂಸ್ಥೆಗಳಿಗೆ ದೇಣಿಗೆ) ಮತ್ತು 80 ಜಿ(ಬಾಡಿಗೆ ಪಾವತಿ) ಗೆ ದೊರಕುವ ರಿಯಾಯಿತಿಯನ್ನೂ ತ್ಯಜಿಸಬೇಕಾಗಿದೆ.
ಅಲ್ಲದೆ ಎಲ್‌ಟಿಸಿ (ಲೀವ್ ಟ್ರಾವೆಲ್ ಕನ್ಸೆಷನ್), ಅಪ್ರಾಪ್ತ ವಯಸ್ಕರ ಆದಾಯಕ್ಕೆ ದೊರಕುವ ರಿಯಾಯಿತಿ, ಸಂಸದರ/ಶಾಸಕರ ಕೆಲವು ಭತ್ಯೆಗಳಿಗೆ ದೊರಕುವ ರಿಯಾಯಿತಿಯನ್ನೂ ತ್ಯಜಿಸಬೇಕು. ಉದ್ಯೋಗಿಗಳಿಗೆ ಒದಗಿಸುವ ಆಹಾರ ಮತ್ತು ಪಾನೀಯದ ಶುಲ್ಕವನ್ನು ರಶೀದಿಯ ಮೂಲಕ ಪಾವತಿಸಿದರೆ ಆಗ ತೆರಿಗೆ ರಿಯಾಯಿತಿ ಸಿಗುವುದಿಲ್ಲ. ಆದರೆ ಕರ್ತವ್ಯ ನಿರ್ವಹಿಸುವ ಸಂದರ್ಭದ ಮೀಟಿಂಗ್ ವೆಚ್ಚ, ವರ್ಗಾವಣೆಯಾದಾಗ ಅಥವಾ ಕರ್ತವ್ಯದ ಮೇಲಿನ ಪ್ರವಾಸಕ್ಕೆ ಸಂಬಂಧಿಸಿದ ವೆಚ್ಚ ಪಾವತಿಗೆ ಹೊಸ ತೆರಿಗೆ ಪದ್ಧತಿಯಲ್ಲೂ ಕಡಿತ ನೀಡಲು ಪ್ರಸ್ತಾವಿಸಲಾಗಿದೆ.







