ಆದಾಯ ತೆರಿಗೆಯಲ್ಲಿ ಕಡಿತ : 2 ಹೊಸ ಆದಾಯ ತೆರಿಗೆ ಹಂತಗಳ ಘೋಷಣೆ

ಹೊಸದಿಲ್ಲಿ, ಫೆ. 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ 2020-21ರ ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಕಡಿತಗಳನ್ನು ಘೋಷಿಸಿದರು, ಕಡಿಮೆ ವೆಚ್ಚದ ಮನೆಗಳ ತೆರಿಗೆ ವಿನಾಯಿತಿಗಳನ್ನು ವಿಸ್ತರಿಸಿದರು ಹಾಗೂ ಡಿವಿಡೆಂಡ್ ವಿತರಣೆಯಲ್ಲಿ ಕಂಪೆನಿಗಳಿಗೆ ರಿಯಾಯಿತಿಗಳನ್ನು ನೀಡಿದರು.
ವೈಯಕ್ತಿಕ ಆದಾಯ ತೆರಿಗೆ ದರದಲ್ಲಿ ಐಚ್ಛಿಕ ವಿನಾಯಿತಿಯನ್ನು ಘೋಷಿಸಿದ ನಿರ್ಮಲಾ, 15 ಶೇಕಡ ಮತ್ತು 25 ಶೇಕಡಗಳ ನೂತನ ತೆರಿಗೆ ಹಂತಗಳನ್ನು ಸೃಷ್ಟಿಸಿದರು. ಇವುಗಳ ಜೊತೆಗೆ ಪ್ರಸಕ್ತ 10 ಶೇಕಡ, 20 ಶೇಕಡ ಮತ್ತು 30 ಶೇಕಡ ತೆರಿಗೆ ಹಂತಗಳು ಮುಂದುವರಿಯಲಿವೆ.
ನಿರ್ದಿಷ್ಟ ಕಡಿತಗಳು ಅಥವಾ ವಿನಾಯಿತಿಗಳನ್ನು ಪಡೆಯದ ವ್ಯಕ್ತಿಗಳಿಗಾಗಿ ನೂತನ ಆದಾಯ ತೆರಿಗೆ ದರ ಹಂತಗಳನ್ನು ಸೃಷ್ಟಿಸಲಾಗಿದೆ.
ನೂತನ ಪ್ರಸ್ತಾಪಿತ ತೆರಿಗೆ ಹಂತಗಳ ವಿವರಗಳು ಹೀಗಿವೆ:
*ವಾರ್ಷಿಕ 2.5 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆಯಿಲ್ಲ
*ವಾರ್ಷಿಕ 2.5 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗಿನ ಆದಾಯಕ್ಕೆ 5 ಶೇಕಡ ತೆರಿಗೆ
*ವಾರ್ಷಿಕ 5 ಲಕ್ಷ ರೂ.ಯಿಂದ 7.5 ಲಕ್ಷ ರೂ.ವರೆಗಿನ ಆದಾಯಕ್ಕೆ 10 ಶೇಕಡ ತೆರಿಗೆ
*7.5 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗಿನ ಆದಾಯಕ್ಕೆ 15 ಶೇಕಡ ತೆರಿಗೆ
*10 ಲಕ್ಷ ರೂ. ಮತ್ತು 12.5 ಲಕ್ಷ ರೂ. ನಡುವಿನ ಆದಾಯಕ್ಕೆ 20 ಶೇಕಡ ತೆರಿಗೆ
*12.5 ಲಕ್ಷ ರೂ. ಮತ್ತು 15 ಲಕ್ಷ ರೂ. ನಡುವಿನ ಆದಾಯಕ್ಕೆ 25 ಶೇಕಡ ತೆರಿಗೆ
*ವಾರ್ಷಿಕ ಆದಾಯ 15 ಶೇಕಡಕ್ಕಿಂತ ಹೆಚ್ಚಾಗಿದ್ದರೆ 30 ಶೇಕಡ ತೆರಿಗೆ.
ಅದೇ ವೇಳೆ, ನೂತನ ತೆರಿಗೆ ದರದಂತೆ ಆದಾಯ ತೆರಿಗೆ ಪಾವತಿಸುವವರಿಗೆ ಸೆಕ್ಷನ್ 80ಸಿ ಮತ್ತು 80ಡಿ ಅಡಿಯಲ್ಲಿ ಸಿಗುವ ವಿನಾಯಿತಿ/ಕಡಿತ, ಎಲ್‌ಟಿಸಿ, ಮನೆ ಬಾಡಿಗೆ ಭತ್ತೆ, ಮನರಂಜನೆ ಭತ್ತೆ ಮತ್ತು ವೃತ್ತಿ ತೆರಿಗೆಯಲ್ಲಿ ಕಡಿತ ಹಾಗೂ ಸ್ವಯಂ ವಾಸಿಸುತ್ತಿರುವ ಅಥವಾ ಖಾಲಿ ಮನೆಗಳ ಮೇಲೆ ತೆರಿಗೆ ವಿನಾಯಿತಿ ಲಭಿಸುವುದಿಲ್ಲ.
ಪ್ರಸಕ್ತ, 2.5 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯಕ್ಕೆ ಆದಾಯ ತೆರಿಗೆ ಇಲ್ಲ. 2.5 ಲಕ್ಷ ಮತ್ತು 5 ಲಕ್ಷ ರೂ. ನಡುವಿನ ಆದಾಯಕ್ಕೆ 5 ಶೇಕಡ, 5 ಲಕ್ಷ ರೂ. ಮತ್ತು 10 ಲಕ್ಷ ರೂ. ನಡುವಿನ ಆದಾಯಕ್ಕೆ 20 ಶೇಕಡ ಹಾಗೂ 10 ಲಕ್ಷ ರೂ.ಗಿಂತ ಹೆಚ್ಚಿನ ವಾರ್ಷಿಕ ಆದಾಯಕ್ಕೆ 30 ಶೇಕಡ ಆದಾಯ ತೆರಿಗೆ ವಿಧಿಸಲಾಗುತ್ತಿದೆ.
‘‘ನೂತನ ಆದಾಯ ತೆರಿಗೆ ವ್ಯವಸ್ಥೆಯು ತೆರಿಗೆದಾರರಿಗೆ ಐಚ್ಛಿಕವಾಗಿದೆ ಎಂದು ನಿರ್ಮಲಾ ಸೀತಾರಾಮನ್ ನುಡಿದರು.
‘‘ಪ್ರಸ್ತಾಪಿತ ತೆರಿಗೆ ವ್ಯವಸ್ಥೆಯು ತೆರಿಗೆ ಪಾವತಿದಾರರಿಗೆ, ಅದರಲ್ಲೂ ಮುಖ್ಯವಾಗಿ ಮಧ್ಯಮ ವರ್ಗದವರಿಗೆ ನೆಮ್ಮದಿ ನೀಡಲಿದೆ’’ ಎಂದು ಅವರು ಅಭಿಪ್ರಾಯಪಟ್ಟರು.







