ಶಾಹೀನ್ ಶಿಕ್ಷಣ ಸಂಸ್ಥೆಯ ಮೇಲೆ ದೇಶದ್ರೋಹ ಪ್ರಕರಣ ದಾಖಲು ಸರಿಯಲ್ಲ: ಬಸವಕುಮಾರ ಪಾಟೀಲ್

ಬೆಂಗಳೂರು, ಫೆ.1: ಶಾಹೀನ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ, ಈ ವಾದ ದಿನೇ ದಿನೇ ದೊಡ್ಡ ಪ್ರಮಾಣದಲ್ಲಿ ಬೆಳೆಸುತ್ತಿರುವುದು ಸರಿಯಲ್ಲ ಎಂದು ಬೀದರ್ ಜಿಲ್ಲೆಯ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ್ ತಿಳಿಸಿದ್ದಾರೆ.
ಶಾಹೀನ್ ಶಿಕ್ಷಣ ಸಂಸ್ಥೆ ಬೀದರ್ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದ್ದು, ಅದರ ಕಾರ್ಯದರ್ಶಿ ಡಾ.ಅಬ್ದುಲ್ ಖದೀರ್, ಶಿಕ್ಷಣ ಕ್ಷೇತ್ರದಲ್ಲಿ ಬಹಳ ದೊಡ್ಡ ಸಾಧನೆ ಮಾಡುತ್ತಿದ್ದಾರೆ. ಅವರು ದೇಶಭಕ್ತರು, ಸಾಮಾಜಿಕ ಮತ್ತು ಶೈಕ್ಷಣಿಕ ಚಿಂತಕರು ಎಂದು ಬಸವಕುಮಾರ ಪಾಟೀಲ್ ಹೇಳಿದ್ದಾರೆ.
ಅಬ್ದುಲ್ ಖದೀರ್ ಎರಡು ವರ್ಷದ ಹಿಂದೆ ದೇಶಕ್ಕಾಗಿ ದುಡಿದ ಸ್ವಾತಂತ್ರ್ಯ ಹೋರಾಟಗಾರರ ಮೆರವಣಿಗೆಯನ್ನು ನಗರದಲ್ಲಿ ನಡೆಸಿ ಅವರನ್ನು ಗೌರವಿಸಿದ ದೇಶಪ್ರೇಮಿಗಳು. ಪ್ರತಿ ಸಭೆ ಸಮಾರಂಭಗಳಲ್ಲಿ ದೇಶದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುತ್ತಾರೆ. ಸಾವಿರಾರು ವಿದ್ಯಾರ್ಥಿಗಳ ಆಶ್ರಯದಾತರು. ಬಹಳ ಉದಾರ ಮನಸ್ಸಿನವರಾದ ಖದೀರ್, ಜಾತಿ-ಮತ-ಪಂಥ ಎಲ್ಲ ಚೌಕಟ್ಟುಗಳನ್ನು ಮೀರಿ ಸರ್ವ ಸಮಾಜದ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಖದೀರ್ ಮಾಡುತ್ತಿರುವ ಸಾಧನೆಗಳಿಂದ ಬೀದರ್ ಜಿಲ್ಲೆಗೆ ಬಹಳ ದೊಡ್ಡ ಹೆಸರು ಬಂದಿದೆ ಎಂಬುದನ್ನು ಮರೆಯುವಂತಿಲ್ಲ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ನಡೆಯುವ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ಅವರ ಸೇವೆ, ಸಹಕಾರ ಇದೆ ಎಂದು ಅವರು ಹೇಳಿದ್ದಾರೆ. ಶಾಹೀನ್‌ನಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯು ಸಂಸ್ಥೆಯ ಬಗ್ಗೆ ಹೆಮ್ಮೆಯ ಭಾವ ಹೊಂದಿದ್ದಾನೆ. ಏಕೆಂದರೆ ಸಂಸ್ಥೆಯಲ್ಲಿ ಎಂದೂ ಸಹ ಜಾತಿ-ಧರ್ಮ, ಮೇಲು-ಕೀಳು ಯಾವುದು ಇಲ್ಲ. ಎಲ್ಲರನ್ನು ಸಮಾನವಾಗಿ ಕಾಣುವಂತಹ ಶಿಕ್ಷಣ ಸಂಸ್ಥೆ ಶಾಹೀನ್ ಆಗಿದೆ. ಇದೊಂದು ಜಾತ್ಯತೀತ ಶಿಕ್ಷಣ ಸಂಸ್ಥೆ ಎಂದು ಬಸವಕುಮಾರ ಪಾಟೀಲ್ ಪ್ರಶಂಸಿದ್ದಾರೆ.
ಶಾಹೀನ್‌ನಲ್ಲಿ ಪ್ರವೇಶ ಪಡೆಯಲು ಬಂದ ಎಷ್ಟೋ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಿ, ಹಲವಾರು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಟ್ಟು ಅವರ ಭವಿಷ್ಯವನ್ನು ಉತ್ತಮವಾಗಿಸುತ್ತಿದ್ದಾರೆ. ಶಾಹೀನ್‌ನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡುವ ಜೊತೆಗೆ ಅವರಿಗೆ ಪ್ರೋತ್ಸಾಹ, ಪ್ರೇರಣೆ ನೀಡಿ, ಉತ್ತಮ ಸಾಧನೆ ಮಾಡುವಂತೆ ಮಾರ್ಗದರ್ಶನ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.
ಹೀಗಾಗಿ ಪ್ರತಿವರ್ಷ ನೀಟ್, ಸಿಇಟಿ ಮುಂತಾದ ವೃತ್ತಿಪರ ಕೋರ್ಸ್‌ಗಳಿಗೆ ನಡೆಯುವ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ದಾಖಲಿಸಿ ಬೀದರ್‌ಗೆ ಒಳ್ಳೆಯ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಗ್ರಾಮೀಣ ಭಾಗದ ಬಡ ಮಕ್ಕಳ ಆಶಾಕಿರಣ ಶಾಹೀನ್ ಶಿಕ್ಷಣ ಸಂಸ್ಥೆಯಾಗಿದೆ ಎಂದು ಬಸವಕುಮಾರ ಪಾಟೀಲ್ ತಿಳಿಸಿದ್ದಾರೆ. 25-30 ವರ್ಷಗಳಿಂದ ನಡೆಯುವ ಈ ಸಂಸ್ಥೆಯಲ್ಲಿ ಇಲ್ಲಿಯತನಕ ಯಾವುದೇ ತರಹದ ಅಹಿತಕರ ಘಟನೆ ನಡೆದ ಉದಾಹರಣೆಗಳಿಲ್ಲ. ಆಕಸ್ಮಿಕವಾಗಿ ನಡೆದ ಈ ಪ್ರಕರಣವನ್ನು ಹೆಚ್ಚೆಚ್ಚು ಬೆಳೆಸದೆ ಶಾಹೀನ್ ಶಿಕ್ಷಣ ಸಂಸ್ಥೆಯ ಮೇಲೆ ಹಾಕಿದ ಪ್ರಕರಣವನ್ನು ವಾಪಸ್ಸು ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳ, ಪಾಲಕರ ಭಾವನೆಗಳನ್ನು ಅರ್ಥಮಾಡಿಕೊಂಡು ಅವರ ಯಶಸ್ಸಿನ ಜೊತೆಗೆ ಜಿಲ್ಲೆಯ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣಮಾಡುವಂತೆ ಬಸವಕುಮಾರ ಪಾಟೀಲ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಶಾಹೀನ್ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರದರ್ಶನಗೊಂಡ ನಾಟಕವೊಂದರಲ್ಲಿ ಪ್ರಧಾನಿಗೆ ಅವಮಾನಿಸಿದ ವಿಷಯ ಕುರಿತು ಪ್ರತಿಕ್ರಿಯಿಸಿರುವ ಡಾ.ಅಬ್ದುಲ್ ಖದೀರ್, ನಾನು ಹೊರ ರಾಜ್ಯದಲ್ಲಿದ್ದೆ. ಇದು ತಪ್ಪಾಗಿದ್ದು, ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದರು. ಅಲ್ಲದೇ, ಸಂಸ್ಥೆಯ ಮಾಧ್ಯಮ ಕಾರ್ಯದರ್ಶಿ ಮತ್ತೊಂದು ಹೇಳಿಕೆ ಹೊರಡಿಸಿ, ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಕೆಲ ಪಾಲಕರು ಸ್ವತಃ ತಮ್ಮ ಮಕ್ಕಳನ್ನು ನಾಟಕದ ಸಂಭಾಷಣೆಗೆ ಸಿದ್ಧಪಡಿಸಿದ್ದು, ಅದರಂತೆಯೇ ಮಕ್ಕಳು ಸಂಭಾಷಣೆ ಮಾಡಿದ್ದರಿಂದ ಈ ಪ್ರಮಾದ ಜರುಗಿದೆ. ಇದು ಆಕಸ್ಮಿಕ, ಉದ್ದೇಶಪೂರ್ವಕವಲ್ಲ. ದೇಶದ ಪ್ರಧಾನಿ ಬಗ್ಗೆ ನಮಗೂ ಗೌರವವಿದೆ ಎಂದು ತಿಳಿಸಿದ್ದರು.







