ಕೇಂದ್ರ ಬಜೆಟಿಗೆ 10ರಲ್ಲಿ ಚಿದಂಬರಂ ನೀಡಿದ ಅಂಕವೆಷ್ಟು ಗೊತ್ತಾ?

ಹೊಸದಿಲ್ಲಿ,ಫೆ.1: ಕೇಂದ್ರ ಸರಕಾರದ 2020-21ನೇ ಸಾಲಿನ ಮುಂಗಡಪತ್ರಕ್ಕೆ ತೀರ ಕಳಪೆ ರೇಟಿಂಗ್ ನೀಡಿರುವ ಮಾಜಿ ವಿತ್ತಸಚಿವ ಪಿ.ಚಿದಂಬರಂ ಅವರು,ಸರಕಾರವು ‘ಸ್ವಾವಲಂಬನೆ,ಸಂರಕ್ಷಣಾವಾದ,ನಿಯಂತ್ರಣ ಮತ್ತು ಆಕ್ರಮಕ ತೆರಿಗೆ ಹೇರಿಕೆ ’ಯಂತಹ ಚರ್ಚಾರ್ಹ ಸ್ಥಿತಿಗಳಿಗೆ ಅಂಟಿಕೊಂಡಿದೆ ಎಂದು ಹೇಳಿದರು.
ಮುಂಗಡಪತ್ರಕ್ಕೆ 1 ಮತ್ತು 10ರ ನಡುವೆ ಒಂದು ಅಂಕ ನೀಡಿ ಎಂಬ ಕೋರಿಕೆಗೆ ಅವರು,‘10ರಲ್ಲಿ ಎರಡು ಅಂಕಿಗಳಿವೆ,1 ಮತ್ತು 0.ಇವುಗಳ ಪೈಕಿ ಯಾವುದನ್ನೂ ನೀವು ಆಯ್ದುಕೊಳ್ಳಬಹುದು ’ಎಂದರು.
ಮುಂಗಡಪತ್ರವನ್ನು ಗೇಲಿ ಮಾಡಿದ ಚಿದಂಬರಂ, ‘ಇದು ಇತ್ತೀಚಿನ ವರ್ಷಗಳಲ್ಲಿ ಹಣಕಾಸು ಮಂತ್ರಿಯೋರ್ವರು ಮಾಡಿರುವ ಅತ್ಯಂತ ದೀರ್ಘ ಮುಂಗಡಪತ್ರ ಭಾಷಣವಾಗಿದೆ. ಅದು 160 ನಿಮಿಷಗಳಷ್ಟು ಉದ್ದವಿತ್ತು. ಆದ್ದರಿಂದ ಇಷ್ಟೊಂದು ಉದ್ದ ಭಾಷಣದಿಂದ ನನ್ನಂತೆಯೇ ನೀವೂ ಹೈರಾಣಾಗಿದ್ದರೆ ಅದು ನಿಮ್ಮ ತಪ್ಪಲ್ಲ ಎಂದರು.
ಇದಕ್ಕೂ ಮುನ್ನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಇದೇ ಧಾಟಿಯಲ್ಲಿ ಮಾತನಾಡಿದ್ದರು. ಬಜೆಟ್ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದ ಅವರು,‘ಅದು ಅರ್ಥ ಮಾಡಿಕೊಳ್ಳಲಾಗದಷ್ಟು ಉದ್ದವಿದೆ ’ಎಂದು ಕಿಚಾಯಿಸಿದ್ದರು. ಅನಾರೋಗ್ಯದಿಂದಾಗಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ತನ್ನ ಮುಂಗಡಪತ್ರ ಭಾಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿದ್ದರು.
ಆರ್ಥಿಕತೆಯು ಗಂಭೀರ ಬೃಹತ್ ಆರ್ಥಿಕ ಸವಾಲನ್ನು ಎದುರಿಸುತ್ತಿದೆ ಮತ್ತು ಕಳೆದ ಆರು ತ್ರೈಮಾಸಿಕಗಳಲ್ಲಿ ಬೆಳವಣಿಗೆಯು ನಿರಂತರವಾಗಿ ಕುಸಿಯುತ್ತಿದೆ ಎನ್ನುವುದನ್ನು ಸರಕಾರವು ಸಂಪೂರ್ಣವಾಗಿ ನಿರಾಕರಿಸಿದೆ ಎಂದ ಚಿದಂಬರಂ,2020-21ರಲ್ಲಿ ಬೆಳವಣಿಗೆ ಪುನಃಶ್ಚೇತನಗೊಳ್ಳುತ್ತದೆ ಎಂದು ಭರವಸೆಯನ್ನು ಮೂಡಿಸುವ ಯಾವುದೇ ಅಂಶ ಈ ಮುಂಗಡಪತ್ರದಲ್ಲಿ ಇಲ್ಲ. ಜಿಡಿಪಿ ಪ್ರಗತಿ ದರ ಮುಂದಿನ ವರ್ಷ ಶೇ.6ರಿಂದ ಶೇ.6.5ರಷ್ಟಾಗಲಿದೆ ಎಂಬ ಹೇಳಿಕೆ ಅಚ್ಚರಿಯದ್ದಾಗಿದೆ ಅಷ್ಟೇ ಅಲ್ಲ,ಹೊಣೆಗೇಡಿತನದ್ದೂ ಆಗಿದೆ ಎಂದರು.
ಆರ್ಥಿಕತೆಯು ಬೇಡಿಕೆ ಕುಸಿತ ಮತ್ತು ಹೂಡಿಕೆ ಕೊರತೆಯ ಬಿಕ್ಕಟ್ಟಿನಲ್ಲಿದೆ. ಈ ಎರಡು ಸವಾಲುಗಳನ್ನು ವಿತ್ತಸಚಿವರು ಗುರುತಿಸಿಲ್ಲ ಮತ್ತು ಇದು ದಯನೀಯವಾಗಿದೆ. ಈ ಸವಾಲುಗಳನ್ನು ಎದುರಿಸಲು ಯಾವುದೇ ಕ್ರಮಗಳನ್ನು ಅವರು ಪ್ರಸ್ತಾಪಿಸಿಲ್ಲ. ಈ ಎರಡು ಸವಾಲುಗಳು ಹಾಗಯೇ ಉಳಿದುಕೊಂಡರೆ ಆರ್ಥಿಕತೆಯು ಚೇತರಿಸಿಕೊಳ್ಳುವುದಿಲ್ಲ ಮತ್ತು ಕೋಟ್ಯಂತರ ಬಡವರು ಮತ್ತು ಮಧ್ಯಮ ವರ್ಗದವರಿಗೆ ನೆಮ್ಮದಿ ಮರೀಚಿಕೆ ಯಾಗುತ್ತದೆ ಎಂದು ಚಿದಂಬಂರಂ ಹೇಳಿದರು.







