ನಿರುದ್ಯೋಗ ಸಮಸ್ಯೆ ನಿವಾರಣೆಗೆ 'ಪ್ರವಾಸಿ ಟ್ಯಾಕ್ಸಿ' ಯೋಜನೆ ಸಹಕಾರಿ: ಸಿಎಂ ಯಡಿಯೂರಪ್ಪ
ಪ್ರವಾಸಿ ಟ್ಯಾಕ್ಸಿ ವಿತರಣೆ ಕಾರ್ಯಕ್ರಮ

ಬೆಂಗಳೂರು, ಫೆ. 1: ನಿರುದ್ಯೋಗ ಸಮಸ್ಯೆ ನಿವಾರಿಸಲು ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಟ್ಯಾಕ್ಸಿ ನೀಡುವ ಯೋಜನೆ ಸಹಕಾರಿ. ಈ ಯೋಜನೆ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಯುವಕರು ಸ್ವತಂತ್ರ ಬದುಕು ಕಟ್ಟಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಕರೆ ನೀಡಿದ್ದಾರೆ.
ಶನಿವಾರ ವಿಧಾನಸೌಧದ ವೈಭವಪೇತ ಮೆಟ್ಟಿಲುಗಳ ಮೇಲೆ ಪ್ರವಾಸೋದ್ಯಮ ಇಲಾಖೆ ಏರ್ಪಡಿಸಿದ್ದ ಎಸ್ಸಿ-ಎಸ್ಟಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ನಿರುದ್ಯೋಗಿ ಯುವಕರಿಗೆ ಟ್ಯಾಕ್ಸಿ ವಿತರಣೆಗೆ ಹಸಿರು ನಿಶಾನೆ ತೋರಿಸಿದ ಬಳಿಕ ಮಾತನಾಡಿದ ಅವರು, ರಾಜ್ಯಾದ್ಯಂತ 450 ಟ್ಯಾಕ್ಸಿಗಳನ್ನು ವಿತರಿಸುತ್ತಿದ್ದು, 107 ಪ್ರವಾಸಿ ಟ್ಯಾಕ್ಸಿ ನೀಡಲಾಗಿದೆ ಎಂದರು.
ಪರಿಶಿಷ್ಟ ಜಾತಿಯ 190 ಫಲಾನುಭವಿಗಳಿಗೆ 5.70 ಕೋಟಿ ರೂ., ಪರಿಶಿಷ್ಟ ಪಂಗಡದ 72 ಫಲಾನುಭವಿಗಳಿಗೆ 2.16 ಕೋಟಿ ರೂ. ಹಾಗೂ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ 262 ಫಲಾನುಭವಿಗಳಿಗೆ ತಲಾ 3ಲಕ್ಷ ರೂ.ನಂತೆ 7.86 ಕೋಟಿ ರೂ. ಸೇರಿ ಒಟ್ಟು 15.72 ಕೋಟಿ ರೂ.ಸಹಾಯಧನ ನೀಡಿ ಪ್ರವಾಸಿ ಟ್ಯಾಕ್ಸಿ ನೀಡಲಾಗಿದೆ ಎಂದು ವಿವರಿಸಿದರು.
ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ಮಾತನಾಡಿ, ನಿರುದ್ಯೋಗಿ ಯುವಕರು ಸ್ವಾವಲಂಬಿಗಳಾಗಬೇಕೆಂದು 2009-10ರಲ್ಲೆ ಯಡಿಯೂರಪ್ಪನವರು ಪ್ರವಾಸಿ ಟ್ಯಾಕ್ಸಿ ಯೋಜನೆ ರೂಪಿಸಿ ಜಾರಿಗೆ ತಂದಿದ್ದರು. ಇದೊಂದು ಉತ್ತಮ ಯೋಜನೆ ಎಂದು ಬಣ್ಣಿಸಿದರು.
ಮುಂದಿನ ವರ್ಷದಿಂದ ಪ್ರವಾಸೋದ್ಯಮಕ್ಕೆ ಪೂರಕವಾದ ಯೋಜನೆ ರೂಪಿಸಲಾಗುವುದು. ಕ್ರೀಡಾ ಸಾಮಗ್ರಿ, ಮೊಬೈಲ್ ಶೌಚಾಲಯ, ಕ್ಯಾಂಟಿನ್ ಸೇರಿದಂತೆ ಇನ್ನಿತರ ಮೂಲ ಸೌಕರ್ಯಕ್ಕೆ ನೆರವು ನೀಡುವ ಚಿಂತನೆ ಇದೆ ಎಂದು ಅವರು ತಿಳಿಸಿದರು.
ದೀನ ದಲಿತರ ಆದಾಯ ದ್ವಿಗುಣ
‘ಕೇಂದ್ರದ ಬಜೆಟ್ ಸರ್ವಜನಾಂಗದ ಏಳ್ಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡ ಮಂಡಿಸಿದ ಅಭಿವೃದ್ಧಿಯ ಆಯವ್ಯಯ. ಇದು ಕಣ್ಣೊರೆಸುವ ಬಜೆಟ್ ಅಲ್ಲ, ಕಣ್ಣು ತೆರೆಸುವ ಬಜೆಟ್ ಆಗಿದೆ. ಬಲಿಷ್ಠ ರಾಷ್ಟಗಳಲ್ಲಿ ಅರ್ಥವ್ಯವಸ್ಥೆಯಲ್ಲಿ 5ನೆ ಸ್ಥಾನದಲ್ಲಿರುವುದು ದೇಶದ 130 ಕೋಟಿ ಜನರೂ ಮೆಚ್ಚಬೇಕು. ದೀನದಲಿತ ಆದಾಯ ದ್ವಿಗುಣಗೊಳಿಸಲಿದೆ’
-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ







