ಸಿವಿಲ್ ವಕೀಲರ ಕೊರತೆಯಿಂದ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ: ನ್ಯಾ.ಹುದ್ದಾರ್

ಉಡುಪಿ, ಫೆ.1: ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅವಕಾಶವಿದ್ದರೂ ಮಾಹಿತಿ ಕೊರತೆ ಹಾಗೂ ಗೊಂದಲ ದಿಂದಾಗಿ ಅನೇಕ ಪ್ರಕರಣಗಳು ಹಲವು ವರ್ಷಗಳಿಂದ ಇತ್ಯರ್ಥವಾಗದೆ ಬಾಕಿ ಉಳಿದಿವೆ. ಇದಕ್ಕೆ ಸಿವಿಲ್ ವಕೀಲರ ಕೊರತೆ ಕೂಡ ಮುಖ್ಯ ಕಾರಣವಾಗಿದೆ ಎಂದು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾ ಧೀಶ ನ್ಯಾ.ರಾಮಚಂದ್ರ ಡಿ.ಹುದ್ದಾರ್ ಹೇಳಿದ್ದಾರೆ.
ಉಡುಪಿ ವಕೀಲರ ಸಂಘದ ವತಿಯಿಂದ ಶನಿವಾರ ಉಡುಪಿ ನ್ಯಾಯಾ ಲಯ ಸಭಾಂಗಣದಲ್ಲಿ ಅವರು ಸಿವಿಲ್ ವ್ಯಾಜ್ಯಗಳ ನ್ಯಾಯದಾನದಲ್ಲಿ ನ್ಯಾಯಾಧೀಶರ ಮತ್ತು ನ್ಯಾಯವಾದಿಗಳ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿ ವಕೀಲರು, ಅರ್ಜಿದಾರರ ಸಂಪೂರ್ಣ ವಿವರ, ಮಾಹಿತಿ, ಸಾಕ್ಷ ಸೇರಿದಂತೆ ಸಂಪೂರ್ಣ ಮಾಹಿತಿ ಪಡೆದು ಕೊಳ್ಳಬೇಕು. ಆ ನಂತರವೇ ಪ್ರಕರಣದ ಕುರಿತ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಇದರಿಂದ ನ್ಯಾಯಾಧೀಶರು ಯಾವುದೇ ಗೊಂದಲ ವಿಲ್ಲದೆ ಅರ್ಜಿಯನ್ನು ವಿಲೇ ವಾರಿ ಮಾಡಿ ಆದೇಶ ನೀಡಲು ಅನುಕೂಲವಾಗುತ್ತದೆ. ನ್ಯಾಯಾಧೀಶರ ಶ್ರೇಷ್ಠ ತೀರ್ಪಿನ ಹಿಂದೆ ನ್ಯಾಯವಾದಿಳ ಪಾತ್ರ ಪ್ರಮುಖವಾಗಿದೆ ಎಂದರು.
ಇಂದಿನ ಯುವ ವಕೀಲರಲ್ಲಿ ಅಧ್ಯಯನ ಕೊರತೆ ಎದ್ದು ಕಾಣುತ್ತದೆ. ಪ್ರಕರಣಗಳ ತೀರ್ಪಿನ ಪ್ರತಿಗಳನ್ನು ಓದಿ ತಿಳಿದುಕೊಳ್ಳುವುದರಿಂದ ಕೋರ್ಟ್ ದಾಖಲೆಗಳಲ್ಲಿ ಬಳಸಲ್ಪಡುವ ಭಾಷೆ ಕಲಿಯಲು ಸಾಧ್ಯವಾಗುತ್ತದೆ. ನ್ಯಾಯಾ ಲಯಕ್ಕೆ ಬರುವಾಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಹಾಗೂ ಜ್ಞಾನವನ್ನು ಪಡೆದಿರಬೇಕು. ಆಗ ಮಾತ್ರ ನಿಮ್ಮ ಬಳಿ ಬರುವವರಿಗೆ ನ್ಯಾಯಾ ಒದಗಿಸಲು ಸಾಧ್ಯ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಷಿ ವಹಿಸಿದ್ದರು. ಪ್ರಧಾನ ಸಿವಿಲ್ ನ್ಯಾಯಾಧೀಶ ವಿವೇಕಾನಂದ ಪಂಡಿತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕಾವೇರಿ ಉಪಸ್ಥಿತರಿದ್ದರು.
ವಕೀಲರ ಸಂಘದ ಅಧ್ಯಕ್ಷ ದಿವಾಕರ್ ಎಂ.ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು. ಪ್ರದೀಪ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.







