ಭೀಕರ ರೂಪ ಪಡೆಯುತ್ತಿರುವ ಕೊರೋನವೈರಸ್: ಮೃತರ ಸಂಖ್ಯೆ 259ಕ್ಕೆ ಏರಿಕೆ

ಬೀಜಿಂಗ್, ಫೆ. 1: ಚೀನಾದಲ್ಲಿ ಕಾಣಿಸಿಕೊಂಡಿರುವ ಭೀಕರ ಕೊರೋನವೈರಸ್ ಕಾಯಿಲೆಗೆ ಕನಿಷ್ಠ 259 ಮಂದಿ ಬಲಿಯಾಗಿದ್ದಾರೆ ಹಾಗೂ ಸುಮಾರು 11,800 ಮಂದಿ ಸೋಂಕು ಪೀಡಿತರಾಗಿದ್ದಾರೆ ಎಂದು ದೇಶದ ಆರೋಗ್ಯ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಸೋಂಕಿನ ಕೇಂದ್ರ ಬಿಂದು ಆಗಿರುವ ಹುಬೈ ಪ್ರಾಂತದಲ್ಲಿ, ಶುಕ್ರವಾರ ಮಧ್ಯರಾತ್ರಿವರೆಗಿನ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 45 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಹುಬೈ ಪ್ರಾಂತದಲ್ಲಿ ಕೊರೋನವೈರಸ್ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಅಲ್ಲಿ 1347 ನೂತನ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಂಖ್ಯೆ 7153ಕ್ಕೆ ಏರಿದೆ.
ಚೀನಾದ್ಯಂತ ಒಟ್ಟು 2012 ನೂತನ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 1795 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚೀನಾದ್ಯಂತ ಕನಿಷ್ಠ 17,988 ಶಂಕಿತ ಸೋಂಕು ಪ್ರಕರಣಗಳಿವೆ ಎಂದು ಅವರು ತಿಳಿಸಿದ್ದಾರೆ.
ವೈದ್ಯಕೀಯ ಉಪಕರಣಗಳ ತೀವ್ರ ಕೊರತೆ
ಸೋಂಕು ಪೀಡಿತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿರುವಂತೆಯೇ, ಹುಬೈ ಪ್ರಾಂತದಲ್ಲಿ ವೈದ್ಯಕೀಯ ಉಪಕರಣಗಳ ತೀವ್ರ ಕೊರತೆ ಎದುರಾಗಿದೆ. ಸಾಕಷ್ಟು ರಕ್ಷಣಾ ಪರಿಕರಗಳಿಲ್ಲದೆಯೇ ಸೋಂಕು ಪೀಡಿತರೊಂದಿಗೆ ನೇರವಾಗಿ ಕೆಲಸ ಮಾಡುವಂತೆ ವೈದ್ಯಕೀಯ ಸಿಬ್ಬಂದಿಯನ್ನು ಒತ್ತಾಯಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
75,000ಕ್ಕೂ ಅಧಿಕ ಪ್ರಕರಣಗಳು?
ಆದರೆ, ‘ಲ್ಯಾನ್ಸ್’ ವೈದ್ಯಕೀಯ ಪತ್ರಿಕೆಗಾಗಿ ಹಾಂಕಾಂಗ್ ವಿಶ್ವವಿದ್ಯಾನಿಲಯದ ಸಂಶೋಧಕರು ಮಾಡಿದ ಅಧ್ಯಯನದ ಪ್ರಕಾರ, ವುಹಾನ್ ನಗರವೊಂದರಲ್ಲೇ 75,000ಕ್ಕೂ ಅಧಿಕ ಸೋಂಕು ಪೀಡಿತರು ಇದ್ದಾರೆ. ಇದು ಅಧಿಕೃತ ಅಂಕಿಅಂಶಗಳಿಗಿಂತ ತುಂಬಾ ಹೆಚ್ಚಾಗಿದೆ. ಅದೂ ಅಲ್ಲದೆ, ಚೀನಾದ ಎಲ್ಲ ಪ್ರಮುಖ ನಗರಗಳ ಜನರು ಮಾರ್ಪಾಡುಗೊಂಡ ಕೊರೋನವೈರಸ್ ಸಾಂಕ್ರಾಮಿಕದ ಭೀತಿಯನ್ನು ಎದುರಿಸುತ್ತಿದ್ದಾರೆ.







