ಬಜೆಟ್ ನಿರಾಶಾದಾಯಕ, ದೇಶದ ಅಭಿವೃದ್ಧಿಗೆ ಮಾರಕ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು, ಫೆ.1: ಕೇಂದ್ರದ ಆಯವ್ಯಯ ಅತ್ಯಂತ ನಿರಾಶಾದಾಯಕವಾಗಿದ್ದು, ಅಭಿವೃದ್ಧಿಗೆ ಪೂರಕವಲ್ಲ, ದೇಶಕ್ಕೆ ಮಾರಕವಾಗುತ್ತದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಶನಿವಾರ ಇಲ್ಲಿನ ಜೆಪಿ ನಗರದಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ದೇಶದ ಪ್ರಗತಿಯ ಆಸೆಯನ್ನೇ ಕಮರಿಸುವ ಅಂಕಿ-ಅಂಶಗಳ ಆಯವ್ಯಯ ಅಷ್ಟೇ ಎಂದು ಟೀಕಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ 5 ವರ್ಷಗಳಲ್ಲಿ ಘೋಷಿತ ಯೋಜನೆಗಳ ಪೈಕಿ ಎಷ್ಟು ಜಾರಿಯಾಗಿವೆ ಎಂಬುದನ್ನು ಹೇಳಿಲ್ಲ. ಹಣದ ಹಂಚಿಕೆಯಲ್ಲೂ ಭಾರೀ ಕಡಿತವಾಗಿದೆ ಎಂದ ಅವರು, ಜಲ ಮಿಷನ್‌ಗೆ ಮೀಸಲಿಟ್ಟ ಹಣ ಯಾವುದೇ ಜನರಿಗೆ ಅನುಕೂಲ ಆಗುವುದಿಲ್ಲ ಎಂದರು.
‘ಕಿಸಾನ್ ಉಡಾನ್’ ಹೆಸರಲ್ಲಿ ರೈತರನ್ನು ಆಕಾಶದ ಮೇಲೆ ಓಡಾಡಿಸ್ತಾರಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ನಿರುದ್ಯೋಗಿ ಯುವಕರಿಗೆ ಯಾವ ರೀತಿಯ ಉದ್ಯೋಗ ಕೊಡುತ್ತೇವೆಂದು ಆಯವ್ಯಯದಲ್ಲಿ ಪ್ರಕಟಿಸಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ತರಬೇತಿ ಕೊಡುತ್ತೇವೆಂದು ಹೇಳಿದ್ದಾರೆ. ಆದರೆ, ಅವರಿಗೆ ಉದ್ಯೋಗ ನೀಡುವುದು ಯಾರು? ಎಂದು ಕೇಳಿದರು.
ದೇಶದ ಆರ್ಥಿಕ ಕುಸಿತಕ್ಕೆ ಬಜೆಟ್‌ನಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳಿಲ್ಲ. ಹೀಗಾಗಿ ಆರ್ಥಿಕ ಸ್ಥಿತಿ ಮತ್ತಷ್ಟು ಅಧೋಗತಿಗೆ ಹೋಗುವ ಸಾಧ್ಯತೆಗಳಿವೆ ಎಂದು ಭವಿಷ್ಯ ನುಡಿದ ಅವರು, ಭೂಸ್ವಾಧೀನ ಕಾಯ್ದೆಯಲ್ಲಿ ಯಾರಿಗೆ ಬೇಕಾದರೂ ಭೂಮಿ ನೀಡುತ್ತೇವೆಂದು ಹೇಳಿದ್ದು, ಇದು ಮತ್ತೊಂದು ಸಿಎಎ ಕಾಯ್ದೆ ರೀತಿಯಲ್ಲಿ ಆಗಲಿದೆ ಎಂದು ಟೀಕಿಸಿದರು.







