ರಾತ್ರೋ ರಾತ್ರಿ ಬಸವಣ್ಣನ ಪ್ರತಿಮೆ ನಿರ್ಮಾಣಕ್ಕೆ ಖಂಡನೆ: ಅಂಬೇಡ್ಕರ್ ಫೋಟೋ ಹಿಡಿದು ಪ್ರತಿಭಟನೆ
ಬೆಂಗಳೂರು, ಫೆ.1: ಸಂಜಯ್ ನಗರದ ನಾಗಶೆಟ್ಟಿ ಸರ್ಕಲ್‌ನಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಾಣ ಮಾಡಲು ಬಿಡದೇ ರಾತ್ರೋ ರಾತ್ರಿ ಬಸವಣ್ಣನ ಪ್ರತಿಮೆ ನಿರ್ಮಾಣ ಮಾಡಿರುವುದನ್ನು ವಿರೋಧಿಸಿ ಅಂಬೇಡ್ಕರ್ ಕಾಲನಿಯ ನಿವಾಸಿಗಳು ನಾಗಶೆಟ್ಟಿ ಸರ್ಕಲ್ ಬಳಿ ಅಂಬೇಡ್ಕರ್ ಫೋಟೋ ಹಿಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಭಾರತೀಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕೋದಂಡರಾಮ, ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಅನುಮತಿ ಕೂಡ ನೀಡಲಾಗಿತ್ತು. ಅಲ್ಲದೇ, ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಸಹ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿದ್ದರು. ಇನ್ನೇನು ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಆಗುತ್ತದೆ ಅನ್ನುವುದನ್ನು ತಿಳಿದ ಚನ್ನಕೇಶವ ಎಜುಕೇಶನ್ ಟ್ರಸ್ಟ್‌ನವರು ರಾತ್ರೋ ರಾತ್ರಿ ಬಸವಣ್ಣನವರ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ ಎಂದು ದೂರಿದರು.
ಪ್ರತಿಭಟನೆಯ ಸ್ವರೂಪ ಹೆಚ್ಚಾಗುತ್ತಿದ್ದಂತೆ ನಾಗಶೆಟ್ಟಿ ಸರ್ಕಲ್ ಬಳಿ ಕೆಲ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥವಾಯಿತು. ಸ್ಥಳಕ್ಕೆ ಆಗಮಿಸಿದ ಸಂಜಯ್ ನಗರ ಪೊಲೀಸರು ಮಧ್ಯರಾತ್ರಿ ಪ್ರತಿಮೆಯನ್ನು ತಂದು ಕೂರಿಸುವುದಕ್ಕೆ ಯಾರು ಅವಕಾಶ ಕೊಟ್ಟರು ಅನ್ನುವುದನ್ನು ಪರಿಶೀಲಿಸೋಣ, ಪ್ರತಿಭಟನೆಯನ್ನ ಹಿಂಪಡೆಯಿರಿ ಎಂದು ಮನವೊಲಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಕಾರ್ಪೋರೇಟರ್ ಆನಂದ್ ಕೂಡ ಬಸವಣ್ಣನ ಪ್ರತಿಮೆ ನಿರ್ಮಾಣ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.
ಸಂಜಯ್ ನಗರದ ನಾಗಶೆಟ್ಟಿ ಸರ್ಕಲ್‌ನಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಾಣ ಮಾಡಲು ಬಿಡದೆ ರಾತ್ರೋ ರಾತ್ರಿ ಬಸವಣ್ಣನವರ ಪ್ರತಿಮೆಯನ್ನ ಪ್ರತಿಷ್ಠಾಪಿಸಿದ್ದು ಬಿಜೆಪಿ ನಾಯಕಿ ಹಾಗೂ ರಾಮಕೃಷ್ಣ ಪಬ್ಲಿಕ್ ಶಾಲೆಯ ಅಧ್ಯಕ್ಷೆ ಸುನಿತಾ ಮಂಜುನಾಥ್ ಎಂದು ಪ್ರತಿಭಟನಾಕಾರರು ಆರೋಪಿಸಿದರು.







