ಉಪ್ಪಿನಂಗಡಿ: ಅಡಿಕೆ ಕಳವು ಪ್ರಕರಣ ; ಮೂವರು ಸೆರೆ

ಉಪ್ಪಿನಂಗಡಿ: ತೋಟಗಳಿಂದ ನಿರಂತರವಾಗಿ ಅಡಿಕೆ ಕಳವುಗೈಯುತ್ತಿದ್ದ ತಂಡವೊಂದನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ಅವರಿಂದ 25 ಸಾವಿರ ರೂ. ಮೌಲ್ಯದ ಅಡಿಕೆ ಸಮೇತ ಒಟ್ಟು 1.50 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಉಪ್ಪಿನಂಗಡಿ ಗ್ರಾಮದ ನಳಿಕೆಮಜಲು ನಿವಾಸಿ ಚಂದ್ರಹಾಸ (23) ಕಜೆಕ್ಕಾರಿನ ಜಗದೀಶ (24) ಹಾಗೂ ಬೊಳ್ಳಾವಿನ ಯೊಗೀಶ (18) ಬಂಧಿತ ಆರೋಪಿಗಳು.
ಕಳೆದ ಕೆಲ ದಿನಗಳಿಂದ ಉಪ್ಪಿನಂಗಡಿ, ಪೆರಿಯಡ್ಕ, ಬೊಳ್ಳಾವು, ನಿನ್ನಿಕಲ್ಲ್, ಆರ್ತಿಲ, ನೆಕ್ಕರೆ, ಕಂಪ ಪರಿಸರದ ಅಡಿಕೆ ತೋಟಗಳಿಂದ ನಿರಂತರವಾಗಿ ಅಡಿಕೆ ಕಳ್ಳತನವಾಗುತ್ತಿತ್ತು. ತೋಟಗಳಲ್ಲಿ ಅಡಿಕೆ ಇದ್ದ ಸಣ್ಣ ಮರಗಳಲ್ಲಿ ಇದ್ದ ಅಡಿಕೆಗಳನ್ನೇ ಕಳವುಗೈಯಲಾಗುತ್ತಿತ್ತು. ಹಲವು ಸಮಯಗಳಿಂದ ಇದು ಒಂದಲ್ಲ ಒಂದು ಕಡೆ ನಡೆಯುತ್ತಿತ್ತು. ಆದರೂ ಈ ಬಗ್ಗೆ ಯಾರೂ ಪೊಲೀಸ್ ದೂರು ನೀಡಿರಲಿಲ್ಲ. ಜ.31ರಂದು ಬೆಳಗ್ಗಿನ ಜಾವ ನೆಕ್ಕರೆ ನಿವಾಸಿ ರಾಜೇಶ್ ಅವರು ನೆಕ್ಕರೆ, ಕಂಪ ಎಂಬಲ್ಲಿ ರಸ್ತೆ ಬದಿಯಿರುವ ತನ್ನ ತೋಟಕ್ಕೆ ತೆರಳಿದ್ದಾಗ ಅಡಿಕೆ ಮರಗಳಿಂದ ಅಡಿಕೆಗಳು ಕಳವುಗೈದಿರುವ ಬಗ್ಗೆ ತಿಳಿದು ಬಂತು. ಈ ಬಗ್ಗೆ ರಾಜೇಶ್ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದು, ತಮಗೆ ದೊರೆತ ಸಾರ್ವಜನಿಕ ಮಾಹಿತಿಯಂತೆ ಅನುಮಾನದ ಮೇರೆಗೆ ಈ ಮೂವರನ್ನು ಪೆರಿಯಡ್ಕ ಬಸ್ ನಿಲ್ದಾಣ ಬಳಿ ಮೋಟಾರು ಸೈಕಲ್‍ಗಳೊಂದಿಗೆ ಹಿಡಿದು, ವಿಚಾರಣೆ ನಡೆಸಿದರು. ಈ ಸಂದರ್ಭ ಇವರು ಈ ಪರಿಸರದಲ್ಲಿ ತೋಟಗಳಿಂದ ಅಡಿಕೆಗಳನ್ನು ಕಳವುಗೈಯುತ್ತಿದ ವಿಷಯವನ್ನು ಬಾಯ್ಬಿಟ್ಟಿದ್ದರು. ಬಳಿಕ ಆರೋಪಿಗಳನ್ನು ಬಂಧಿಸಿದ ಪೊಲೀಸರು ಇವರು ಅಡಿಕೆ ಕಳವಿಗೆ ಬಳಸುತ್ತಿದ್ದ 50 ಸಾವಿರ ರೂ. ಮೌಲ್ಯದ ಅಪಾಚಿ ಮೋಟಾರ್ ಸೈಕಲ್ ಹಾಗೂ ಡಿಯೋ ಮೋಟಾರ್ ಸೈಕಲ್‍ಗಳನ್ನು ವಶಕ್ಕೆ ತೆಗೆದುಕೊಂಡರು. ಅಲ್ಲದೇ, ತಾವು ಕಳವುಗೈದು ಅಂಗಡಿಗಳಿಗೆ ನೀಡಿದ್ದ 25 ಸಾವಿರ ರೂ. ಮೌಲ್ಯದ ಅಡಿಕೆಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.







