ನ್ಯೂಝಿಲ್ಯಾಂಡ್ ವಿರುದ್ಧ 4ನೇ ಟ್ವೆಂಟಿ-20: ನಿಧಾನಗತಿಯ ಬೌಲಿಂಗ್‌ಗೆ ಭಾರತಕ್ಕೆ ದಂಡ
ವೆಲ್ಲಿಂಗ್ಟನ್, ಫೆ.1: ನ್ಯೂಝಿಲ್ಯಾಂಡ್ ವಿರುದ್ಧ ವೆಸ್ಟ್‌ಪ್ಯಾಕ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ನಾಲ್ಕನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡ ಭಾರತೀಯ ಕ್ರಿಕೆಟ್ ತಂಡಕ್ಕೆ ಪಂದ್ಯಶುಲ್ಕದಲ್ಲಿ ಶೇ.40ರಷ್ಟು ದಂಡ ವಿಧಿಸಲಾಗಿದೆ.
ವಿರಾಟ್ ಕೊಹ್ಲಿ ಪಡೆ ನಿಗದಿತ ಸಮಯದಲ್ಲಿ ಎರಡು ಓವರ್ ಕಡಿಮೆ ಬೌಲಿಂಗ್ ಮಾಡಿದ್ದ ಕಾರಣ ಐಸಿಸಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ದಂಡ ವಿಧಿಸಿದರು.
ಕಡಿಮೆ ಓವರ್-ರೇಟ್ ಪ್ರಮಾದಕ್ಕೆ ಸಂಬಂಧಿಸಿ ಆಟಗಾರರು ಹಾಗೂ ಆಟಗಾರರ ಸಹಾಯಕ ಸಿಬ್ಬಂದಿಗೆ ಇರುವ ಐಸಿಸಿ ನೀತಿ ಸಂಹಿತೆ ಆರ್ಟಿಕಲ್ 2.22ರ ಪ್ರಕಾರ ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲವಾಗುವ ಒಂದು ತಂಡಕ್ಕೆ ಪ್ರತಿ ಓವರ್‌ಗೆ ಪಂದ್ಯಶುಲ್ಕದಲ್ಲಿ ಶೇ.20ರಷ್ಟು ದಂಡ ವಿಧಿಸಲಾಗುತ್ತದೆ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಆನ್‌ಫೀಲ್ಡ್ ಅಂಪೈರ್‌ಗಳಾದ ಕ್ರಿಸ್ ಬ್ರೌನ್ ಹಾಗೂ ಶಾನ್ ಹೇಗ್ ಹಾಗೂ ಮೂರನೇ ಅಂಪೈರ್ ಅಶ್ಲೆ ಮೆಹ್ರೊಟಾ ಕೊಹ್ಲಿ ಪಡೆ ವಿರುದ್ದ ವರದಿ ಸಲ್ಲಿಸಿದ್ದರು. ಭಾರತ 5 ಪಂದ್ಯಗಳ ಟ್ವೆಂಟಿ-20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಮಣಿಸಿತು.





