ಇದು ಪ್ರತಿಭಟನೆಗಳ ಯುಗ

ಅದೇನಿದ್ದರೂ ಸಿಎಎ, ಎನ್‌ಆರ್‌ಸಿ ಪ್ರತಿಭಟನೆಗಳ ಭವಿಷ್ಯ ಏನೇ ಇರಲಿ, ಈ ಪ್ರತಿಭಟನೆಗಳು ದೇಶದ ಯುವಜನತೆಗೆ ಪ್ರತಿರೋಧದ ಒಂದು ಹೊಸ ರೂಪವನ್ನು ಅಭಿವ್ಯಕ್ತಿಸಲು ಅವಕಾಶ ಮಾಡಿಕೊಟ್ಟಿವೆ. ಅಲ್ಲದೆ ಅಂತರ್ ತಂಡ ಏಕತೆಯನ್ನು ಸಾಧಿಸಲು ಮತ್ತು ಸರ್ವಾಧಿಕಾರಿಯ ಆಡಳಿತ ಅಭೇದ್ಯ ಎಂಬ ಮಿತಿಯನ್ನು ಹುಸಿಗೊಳಿಸಿವೆ.
ಕಳೆದ ವರ್ಷ ವಿಶ್ವದ ಹಲವಾರು ದೇಶಗಳಲ್ಲಿ ಜನಸಮುದಾಯಗಳ ಭಾರೀ ಚಳವಳಿಗಳು ನಡೆದು 2019ರ ವರ್ಷವನ್ನು ‘ಬೀದಿ ಪ್ರತಿಭಟನೆಗಾರರ ವರ್ಷ’ವೆಂದು ಉಲ್ಲೇಖಿಸಲಾಯಿತು. ಹಾಂಗ್‌ಕಾಂಗ್, ಚಿಲಿ, ಕ್ಯಾಟಲೋನಿಯಾ, ಪಶ್ಚಿಮ ಏಶ್ಯ ಹಾಗೂ ವಿಶ್ವದ ಇತರ ಭಾಗಗಳಲ್ಲಿ ರಾಜಕೀಯ ಸ್ವಾತಂತ್ರ್ಯದಿಂದ ಆರಂಭಿಸಿ ಆರ್ಥಿಕ ಸಮಾನತೆ ಹಾಗೂ ಭ್ರಷ್ಟಾಚಾರದ ವರೆಗೆ ವಿವಿಧ ವಿಷಯಗಳಿಗಾಗಿ ಪ್ರತಿಭಟನೆಗಳು ನಡೆದವು.
ಪ್ರತಿಭಟನೆಗಳಿಗೆ ಬೇರೆ ಬೇರೆ ಕಾರಣಗಳಿದ್ದವು. ಹಾಂಗ್‌ಕಾಂಗ್‌ನಲ್ಲಿ ಅಲ್ಲಿಯ ಮೂಲ ನಿವಾಸಿಗಳನ್ನು ಚೀನಾದ ಮುಖ್ಯ ಭಾಗದಲ್ಲಿ ವಿಚಾರಣೆಗೆ ಗುರಿಪಡಿಸಬಹುದಾಗಿದ್ದ (ಎಕ್ಸ್ ಟ್ರಡಿಷನ್ ಬಿಲ್) ಮಸೂದೆಯೊಂದರ ವಿರುದ್ಧ ಪ್ರತಿಭಟನೆಗಳು ನಡೆದವು. ಮಸೂದೆಯನ್ನು ಹಿಂದಕ್ಕೆ ಪಡೆದ ಬಳಿಕ ಪ್ರತಿಭಟನೆಕಾರರು ತಮ್ಮ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ಕುರಿತು ವಿಚಾರಣೆ ನಡೆಯಬೇಕೆಂದು ಹಾಗೂ ಇನ್ನಷ್ಟು ಪ್ರಜಾಸತ್ತಾತ್ಮಕ ಸುಧಾರಣೆಗಳಾಗಬೇಕೆಂದು ಪ್ರತಿಭಟಿಸಿದರು. ಚಿಲಿಯ ಸ್ಯಾಂಟಿಯಾಗೋದ ಮೆಟ್ರೊ ದರಗಳ ಏರಿಕೆಯ ವಿರುದ್ಧ ಆರಂಭವಾದ ಪ್ರತಿಭಟನೆಗಳು ಬಳಿಕ ಸಮಾನತೆಯ ವಿರುದ್ಧ ಆರಂಭವಾದ ಪ್ರತಿಭಟನೆಗಳು ಬಳಿಕ ಅಸಮಾನತೆಯ ವಿರುದ್ಧ ಒಂದು ದೊಡ್ಡ ಅಭಿಯಾನವಾಗಿ ಬೆಳೆದವು. ಬಾರ್ಸಿಲೋನಾದಲ್ಲಿ ಕ್ಯಾಟಲನ್ ಕಾರ್ಯಕರ್ತರನ್ನು ವಿಧ್ವಂಸಕ ಕೃತ್ಯಕ್ಕಾಗಿ ವಿಚಾರಣೆ ನಡೆಸುವುದರ ವಿರುದ್ಧ ಪ್ರತಿಭಟನೆಗಳು ಆರಂಭಗೊಂಡವು. ಲೆಬನಾನ್, ಈಜಿಪ್ಟ್ ಮತ್ತು ಇರಾಕ್ ನಲ್ಲಿ ಕೂಡ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಷಯಗಳ ಕುರಿತಾಗಿ ಪ್ರತಿಭಟನೆಗಳು ನಡೆದವು.
ಈ ಪ್ರತಿಭಟನೆಗಳಿಗೆ ಕಾರಣಗಳು ಬೇರೆ ಬೇರೆ ಇವೆಯಾದರೂ, ಪ್ರತಿಭಟನೆಗಳಲ್ಲಿ ಕೆಲವು ಸಾಮಾನ್ಯ ಅಂಶಗಳು ಕಾಣಿಸುತ್ತವೆ: ಈ ಚಳವಳಿಗಳಿಗೆ ಬಹುತೇಕ ನಾಯಕರಿಲ್ಲ. ಭಾರತದಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ನಡೆದಿರುವ ಪ್ರತಿಭಟನೆಗಳ ಹಾಗೆ. ಇವುಗಳು ವಿರೋಧ ಪಕ್ಷಗಳು ಹಮ್ಮಿಕೊಂಡಿರುವ ಪ್ರತಿಭಟನೆಗಳಲ್ಲ ಮತ್ತು ಇವುಗಳು ವಿಕೇಂದ್ರಿತ ಜಾಲಗಳ ಮೂಲಕ ಕಾರ್ಯಾಚರಿಸುತ್ತವೆ. ಅಲ್ಲದೆ ಬಹುಶಃ ಅವುಗಳು ಅಹಿಂಸಾತ್ಮಕ ಚಳವಳಿಗಳು ಹಾಗೂ ವಿನೂತನವಾದ ಚಳವಳಿ ತಂತ್ರಗಳನ್ನು ಬಳಸಿಕೊಂಡವುಗಳು ಮತ್ತು ಆ ಚಳವಳಿಗಳಲ್ಲಿ ಯುವಜನತೆ, ವಿಶೇಷವಾಗಿ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ.
ಸರಕಾರಗಳು ಈ ಪ್ರತಿಭಟನೆಗಳಿಗೆ ತೋರಿದ ಪ್ರತಿಕ್ರಿಯೆ ಎಂದರೆ ಅವು ಪ್ರತಿಭಟನಾಕಾರರ ಕೆಲವು ಬೇಡಿಕೆಗಳನ್ನು ಒಪ್ಪಿಕೊಂಡಿವೆ ಮತ್ತು ಬಹಳಷ್ಟು ವೇಳೆ ಪಾಶವೀಬಲ ಪ್ರಯೋಗ ಮಾಡಿ ಚಳವಳಿಗಳನ್ನು ಹತ್ತಿಕ್ಕಲು ಪ್ರಯತ್ನಿಸಿವೆ.
ಹೀಗೆ ಪ್ರತಿಭಟನೆಗಳು ನಡೆದ ದೇಶಗಳಲ್ಲಿ ಭಾರತ ಮಾತ್ರ ದೀರ್ಘ ಕಾಲದಿಂದ ಅಸ್ತಿತ್ವದಲ್ಲಿರುವ ಪ್ರಜಾಪ್ರಭುತ್ವವಾದರೂ, ಅದು ಈ ಸಂಪೂರ್ಣ ಪ್ರಜಾಸತ್ತಾತ್ಮಕವಾದ ಅಭಿವ್ಯಕ್ತಿಯನ್ನು ಹತ್ತಿಕ್ಕುವಲ್ಲಿ ಅತ್ಯಂತ ಹೆಚ್ಚು ಪಾಶವೀಯವಾಗಿ ವರ್ತಿಸಿದೆ.
ಈ ನಿಟ್ಟಿನಲ್ಲಿ ಅದು ಅನೇಕ ತಂತ್ರಗಳನ್ನು ಬಳಸಿದೆ: ಇಂಟರ್‌ನೆಟ್ ಸಂಪರ್ಕ ಕಡಿದು ಹಾಕುವುದು, ನಗರಗಳಲ್ಲಿ 144ನೇ ಸೆಕ್ಷನ್ ಜಾರಿ ಮಾಡುವುದು, ಪ್ರತಿಭಟನಾಕಾರರನ್ನು ಬಂಧಿಸುವುದು ಹಾಗೂ ಕ್ರೂರವಾಗಿ ಪೊಲೀಸ್ ಶಕ್ತಿಯನ್ನು, ಪಡೆಯನ್ನು ಬಳಸುವುದು.
ಈಗ ನಡೆಯುತ್ತಿರುವ ಚಳವಳಿಗಳು 2011ರಲ್ಲಿ ನಡೆದ ಪ್ರತಿಭಟನೆಗಳನ್ನು ಜ್ಞಾಪಿಸುತ್ತವೆ: ದಿ ಅರಬ್ ಸ್ಪ್ರಿಂಗ್, ಆಕ್ಯುಪೈ ಮೂವ್‌ಮೆಂಟ್ ಮತ್ತು ಭಾರತದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿ. ಆದರೆ ಇದಕ್ಕಿಂತ ಹೆಚ್ಚು ಹೋಲಿಕೆ ಇರುವ ಚಳವಳಿಗಳೆಂದರೆ 1968ರಲ್ಲಿ ನಡೆದ ಚಳವಳಿಗಳು. ಆ ಚಳವಳಿಗಳಲ್ಲಿ ವಿಶೇಷವಾಗಿ ಪ್ಯಾರಿಸ್ ನಗರದಲ್ಲಿ ನಡೆದ ಚಳವಳಿಗಳಲ್ಲಿ ಎದ್ದುಕಂಡ ಅಂಶವೆಂದರೆ ವಿದ್ಯಾರ್ಥಿಗಳ ಹಾಗೂ ದುಡಿಯುವ/ ಕಾರ್ಮಿಕ ವರ್ಗಗಳ ನಡುವಿನ ಒಗ್ಗಟ್ಟು... ಈಗ ನಡೆಯುತ್ತಿರುವ ಪ್ರತಿಭಟನೆಗಳು ಅಂದಿನ ಚಳವಳಿಗಳು ನಡೆದಂತಹ ತೀವ್ರ ಗಾಮಿ ರೂಪವನ್ನು ಇನ್ನೂ ಪಡೆದಿಲ್ಲ. ಅದೇನಿದ್ದರೂ ಪ್ರತಿಭಟನಾಕಾರರ ನಡುವೆ ಆಯಕಟ್ಟಿನ ಮೈತ್ರಿಗಳು ಕಂಡುಬರುತ್ತವೆ. ಉದಾಹರಣೆಗೆ ಹಾಂಗ್‌ಕಾಂಗ್‌ನಲ್ಲಿ ಬಳಸಲಾದ ‘‘ಬೀ ವಾಟರ್’’ ವಿಧಾನಗಳನ್ನು ಕ್ಯಾಟಲೋನಿಯಾ ಬಳಸಿಕೊಂಡಿದೆ. ಬ್ರೂಸ್ ಲೀಯ ‘‘ಬಿ ವಾಟರ್ ಮೈ ಫ್ರೆಂಡ್’’ ಎಂಬ ಮಾತಿನಿಂದ ಸ್ಫೂರ್ತಿ ಪಡೆದ ಪತಿಭಟನಾಕಾರರು ನಮನೀಯವಾದ (ನೀರಿನ ಹಾಗೆ ಎಲ್ಲೆಂದರಲ್ಲಿ ಹರಿಯುವ/ ಹರಡುವ, ಮಾರ್ಗ ಬದಲಿಸುತ್ತಾ ಹೋಗುವ) ಚಳವಳಿ ತಂತ್ರಗಳನ್ನು ಬಳಸಿದ್ದಾರೆ. ಭಾರತ ಸರಕಾರ ಇನ್ನಷ್ಟು ದಮನಕಾರಿಯಾದಲ್ಲಿ ಚಳವಳಿಕಾರರು ಪ್ರತಿಭಟನೆಯ ಈ ವಿಧಾನಗಳನ್ನು ಕೂಡ ಪರಿಗಣಿಸಬಹುದು.
ಅಲ್ಲದೆ ಹಾಂಗ್‌ಕಾಂಗ್ ಮತ್ತು ಚಿಲಿಯಲ್ಲಿ ನಡೆದ ಪ್ರತಿಭಟನೆಗಳ ಪರಿಣಾಮವಾಗಿ ಅಲ್ಲಿಯ ಸರಕಾರಗಳು ಪ್ರಸ್ತಾವಿತ ಕ್ರಮಗಳನ್ನು ಹಿಂದೆಗೆದುಕೊಂಡಿತು. ಆದರೆ ಭಾರತ ಸರಕಾರ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅದೇನಿದ್ದರೂ ಸಿಎಎ, ಎನ್‌ಆರ್‌ಸಿ ಪ್ರತಿಭಟನೆಗಳ ಭವಿಷ್ಯ ಏನೇ ಇರಲಿ, ಈ ಪ್ರತಿಭಟನೆಗಳು ದೇಶದ ಯುವಜನತೆಗೆ ಪ್ರತಿರೋಧದ ಒಂದು ಹೊಸ ರೂಪವನ್ನು ಅಭಿವ್ಯಕ್ತಿಸಲು ಅವಕಾಶ ಮಾಡಿಕೊಟ್ಟಿವೆ. ಅಲ್ಲದೆ ಅಂತರ್ ತಂಡ ಏಕತೆಯನ್ನು ಸಾಧಿಸಲು ಮತ್ತು ಸರ್ವಾಧಿಕಾರಿಯ ಆಡಳಿತ ಅಭೇದ್ಯ ಎಂಬ ಮಿತಿಯನ್ನು ಹುಸಿಗೊಳಿಸಿವೆ.
(ಲೇಖಕರು ಓರ್ವ ನ್ಯಾಯವಾದಿ ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ಓರ್ವ ಸಂಶೋಧಕ ಮತ್ತು ಸೆಂಟರ್ ಫಾರ್ ಲಾ ಆ್ಯಂಡ್ ಪಾಲಿಸಿ ರಿಸರ್ಚ್‌ನ ಸಲಹೆಗಾರ ಸಮಾಲೋಚಕರಾಗಿದ್ದಾರೆ.
ದಿ ಹಿಂದೂ







