ಚೀನಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ ಮುಂದೂಡಿಕೆ
ಶಾಂಘೈ, ಫೆ.1: ಚೀನಾ ಹಾಗೂ ಅದರ ನೆರೆಹೊರೆ ರಾಷ್ಟ್ರಗಳಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಭಯಭೀತಿ ಹುಟ್ಟಿಸಿರುವ ಹಿನ್ನಲೆಯಲ್ಲಿ ಈ ತಿಂಗಳಾಂತ್ಯದಲ್ಲಿ ನಿಗದಿಯಾಗಿದ್ದ ಚೀನಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಮುಂದೂಡಲು ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ(ಬಿಡಬ್ಲುಎಫ್) ಹಾಗೂ ಚೀನಾ ಬ್ಯಾಡ್ಮಿಂಟನ್ ಸಂಸ್ಥೆಗಳು(ಸಿಬಿಎ) ನಿರ್ಧರಿಸಿವೆ.
ಬಿಡಬ್ಲುಎಫ್ ಹಾಗೂ ಸಿಬಿಎ ಎಲ್ಲ ಅಗತ್ಯವಿರುವ ಆರೋಗ್ಯ, ಸುರಕ್ಷೆ ಹಾಗೂ ಸಾರಿಗೆ ತೊಂದರೆಯನ್ನು ಪರಿಗಣನೆಗೆ ತೆಗೆದುಕೊಂಡಿದೆ. ಈ ಸಮಯದಲ್ಲಿ ಟೂರ್ನಮೆಂಟ್‌ನ್ನು ಮುಂದೂಡುವುದು ಸೂಕ್ಷ್ಮ ವಿಚಾರವಾಗಿದೆ. ಹಲವು ಆಟಗಾರರು ಈಗಾಗಲೇ ಟೂರ್ನಮೆಂಟ್‌ನಿಂದ ಹಿಂದೆ ಸರಿದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಬಿಡಬ್ಲುಎಫ್ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದೆ. ಸೂಪರ್-100 ಟೂರ್ನಮೆಂಟ್ ಫೆಬ್ರವರಿ 25ರಿಂದ ಮಾರ್ಚ್ 1ರ ತನಕ ನಿಗದಿಯಾಗಿತ್ತು. ಪರ್ಯಾಯ ಆಯ್ಕೆಯ ಕುರಿತು ಚರ್ಚೆ ನಡೆಸಲಾಗುತ್ತಿದೆ. ಮೇನಲ್ಲಿ ಹೊಸ ಸ್ಥಳ ಘೋಷಣೆಯಾಗಬಹುದು. ಎಪ್ರಿಲ್ 28ರಂದು ಕೊನೆಯಾಗಲಿರುವ ಒಲಿಂಪಿಕ್ಸ್ ಅರ್ಹತಾ ಅವಧಿಯ ವೇಳೆ ಶಟ್ಲರ್‌ಗಳು ಒಂದು ಟೂರ್ನಿಯಿಂದ ವಂಚಿತವಾಗಲಿದ್ದಾರೆ.





