ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ ಹಾರ್ದಿಕ್ ಪಾಂಡ್ಯ ಔಟ್

ಹೊಸದಿಲ್ಲಿ,ಫೆ.1: ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ನ್ಯೂಝಿಲ್ಯಾಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಪತ್ರಿಕಾ ಪ್ರಕಟನೆಯೊಂದು ದೃಢಪಡಿಸಿದೆ.
ಪಾಂಡ್ಯ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಉಳಿಯಲಿದ್ದಾರೆ. ಬೆನ್ನುನೋವಿನಿಂದ ಬಳಲುತ್ತಿದ್ದ ಪಾಂಡ್ಯ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.
ಎನ್‌ಸಿಎ ಮುಖ್ಯ ಫಿಸಿಯೋ ಆಶೀಷ್ ಕೌಶಿಕ್ ಜೊತೆ ಲಂಡನ್‌ಗೆ ತೆರಳಲಿರುವ ಪಾಂಡ್ಯ ಬೆನ್ನುಮೂಳೆಯ ಸರ್ಜನ್ ಡಾ.ಜೇಮ್ಸ್ ಅಲಿಬೊನ್‌ರನ್ನು ಭೇಟಿಯಾಗಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ನ್ಯೂಝಿಲ್ಯಾಂಡ್ ಪ್ರವಾಸದ ಮೂಲಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗುವ ಕನಸು ಕಾಣುತ್ತಿದ್ದ ಪಾಂಡ್ಯಗೆ ಈ ಸುದ್ದಿ ಬೇಸರ ತರಿಸಿದೆ. ಆದರೆ, ಅವರು ತಂಡಕ್ಕೆ ಲಭ್ಯವಿರಬೇಕಾದರೆ,ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗಿದೆ.
ಈ ಹಿಂದೆ ಹಾರ್ದಿಕ್‌ರನ್ನು ಎರಡು 50 ಓವರ್‌ಗಳ ಪಂದ್ಯಕ್ಕೆ ಭಾರತ ‘ಎ’ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಕೊನೆಯ ಕ್ಷಣದಲ್ಲಿ ಹಾರ್ದಿಕ್ ಬದಲಿಗೆ ವಿಜಯ ಶಂಕರ್‌ರನ್ನು ಆಯ್ಕೆ ಮಾಡಲಾಗಿತ್ತು.







