ಗುಂಡು ಹಾರಿಸುವುದನ್ನು ನಿಲ್ಲಿಸಿ : ಸಚಿವ ಠಾಕೂರ್ ವಿರುದ್ಧ ಲೋಕಸಭೆಯಲ್ಲಿ ಪ್ರತಿಭಟನೆ

ಹೊಸದಿಲ್ಲಿ, ಫೆ.3: ಪೌರತ್ವ ಕಾಯ್ದೆ ವಿರೋಧಿಸಿ ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ಸೋಮವಾರ ಲೋಕಸಭೆಯಲ್ಲಿ ವಿಪಕ್ಷ ಸದಸ್ಯರು ‘ಗೋಲಿ ಮಾರ್ನಾ ಬಂದ್ ಕರೋ, ದೇಶ್ ಕಾ ತೋಡ್ನ ಬಂದ್ ಕರೋ’ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ದಿಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್ ನೀಡಿರುವ ವಿವಾದಾತ್ಮಕ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸದಸ್ಯರು ಲೋಕಸಭೆಯಲ್ಲಿ ಘೋಷಣೆ ಕೂಗಿದರು. ವಿತ್ತ ಖಾತೆಯ ಸಹಾಯಕ ಸಚಿವರಾಗಿರುವ ಠಾಕುರ್ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಮುಂದಾಗುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿ ಅಡ್ಡಿಪಡಿಸಿದರು.
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆಯೇ ಪೌರತ್ವ ಕಾಯ್ದೆ ವಿರೋಧಿಸಿ ಘೋಷಣೆ ಆರಂಭಿಸಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟಿಸಿದರು. ಸಚಿವ ಠಾಕೂರ್ ಹೇಳಿಕೆ ವಿರೋಧಿಸಿ ಘೋಷಣೆ ಕೂಗಿದ ವಿಪಕ್ಷ ಸದಸ್ಯರು ‘ಎಲ್ಲಿದೆ ನಿಮ್ಮ ಬುಲೆಟ್’ ಎಂದು ಠಾಕೂರ್‌ರನ್ನು ಪ್ರಶ್ನಿಸಿದರು.
‘ಪೌರತ್ವ ಕಾಯ್ದೆ ಬೇಡ, ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ಉಳಿಸಿ, ಗುಂಡು ಹೊಡೆಯುವುದನ್ನು ನಿಲ್ಲಿಸಿ, ದೇಶ ವಿಭಜಿಸುವುದನ್ನು ನಿಲ್ಲಿಸಿ’ ಇತ್ಯಾದಿ ಘೋಷಣೆ ಮೊಳಗಿಸಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಓಂ ಬಿರ್ಲಾ, ಯುವಕರ ಕೌಶಲ್ಯ ವೃದ್ಧಿಯಂತಹ ಮುಖ್ಯವಾದ ವಿಷಯದ ಚರ್ಚೆ ಸದನದಲ್ಲಿ ನಡೆಯುತ್ತಿದ್ದು ಸದಸ್ಯರು ತಮ್ಮ ಆಸನಕ್ಕೆ ಮರಳಿ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಶ್ನೋತ್ತರ ಅವಧಿ ಸುಗಮವಾಗಿ ನಡೆಯುವ ಬಗ್ಗೆ ಸದನದ ನಾಯಕರು ಭರವಸೆ ನೀಡಿದ್ದಾರೆ ಎಂದು ನೆನಪಿಸಿದ ಸ್ಪೀಕರ್, ಪ್ರಶ್ನೋತ್ತರ ಅವಧಿಯ ಬಳಿಕ ಶೂನ್ಯ ಅವಧಿಯಲ್ಲಿ ಸದಸ್ಯರು ಯಾವುದೇ ಪ್ರಶ್ನೆಯನ್ನು ಎತ್ತಬಹುದು ಎಂದರು. ಆದರೆ ಇದಕ್ಕೆ ಕಿವಿಗೊಡದ ಸದಸ್ಯರು ಘೋಷಣೆ ಕೂಗುವುದನ್ನು ಮುಂದುವರಿಸಿದಾಗ ಸದನದ ಕಲಾಪವನ್ನು 10 ನಿಮಿಷ ಮುಂದೂಡುವುದಾಗಿ ಸ್ಪೀಕರ್ ಪ್ರಕಟಿಸಿದರು.







