ಕಲಾಕ್ಷೇತ್ರ ಅನುಮತಿ ರದ್ದುಪಡಿಸಿದ ಬಳಿಕ ಟಿ.ಎಂ.ಕೃಷ್ಣ ಪುಸ್ತಕ ಬಿಡುಗಡೆಗೆ ಮುಗಿಬಿದ್ದ ಜನರು

ಚೆನ್ನೈ: ಖ್ಯಾತ ಕರ್ನಾಟಿಕ್ ಸಂಗೀತ ಕಲಾವಿದ ಟಿ.ಎಂ.ಕೃಷ್ಣ ಅವರ 'ಸೆಬಾಸ್ಟಿಯನ್ & ಸನ್ಸ್' ಕೃತಿ ಬಿಡುಗಡೆ ಸಮಾರಂಭಕ್ಕೆ ಚೆನ್ನೈ ಮೂಲದ ಕಲಾಕ್ಷೇತ್ರ ಫೌಂಡೇಷನ್ ಅನುಮತಿ ನಿರಾಕರಿಸಿದ್ದು, ನಂತರ ಇಲ್ಲಿನ ಕಾಲೇಜು ಸಭಾಂಗಣದಲ್ಲಿ ನಡೆದ ಸಮಾರಂಭಕ್ಕೆ ಸಾರ್ವಜನಿಕರು ಮುಗಿಬಿದ್ದಿದ್ದಾರೆ.
ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ ಸಭಾಂಗಣದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದರು. ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಬರುತ್ತದೆ ಎಂಬ ಕಾರಣ ನೀಡಿ ಅನುಮತಿ ರದ್ದುಪಡಿಸಲಾಗಿತ್ತು. "ಕೀಪಿಂಗ್ ದ ಕೌ ಆ್ಯಂಡ್ ಬ್ರಾಹ್ಮಿನ್ ಅಪಾರ್ಟ್" ಪುಸ್ತಕದ ಆಯ್ದ ಅಂಶಗಳು ಪ್ರಕಟವಾದ ಬಳಿಕ ಅನುಮತಿ ರದ್ದುಪಡಿಸಲಾಗಿತ್ತು.
ಕರ್ನಾಟಕ ಸಂಗೀತ ಜಗತ್ತಿನಲ್ಲಿ ಬ್ರಾಹ್ಮಣರ ಪ್ರಾಬಲ್ಯವಿದ್ದರೆ ಮೃದಂಗ ತಯಾರಕರು ಬಹುತೇಕ ಮಂದಿ ದಲಿತರು ಎಂದು ಕೃತಿಯಲ್ಲಿ ಕೃಷ್ಣ ಹೇಳಿದ್ದಾರೆ. ಬ್ರಾಹ್ಮಣ ಸಮುದಾಯ ಗೋಮಾಂಸ ಭಕ್ಷಣೆಗೆ ವಿರೋಧ ವ್ಯಕ್ತಪಡಿಸಿದರೆ, ಮೃದಂಗಕ್ಕೆ ಹಸುವಿನ ಚರ್ಮ ಬಳಸಲಾಗುತ್ತದೆ ಎಂದವರು ವಿವರಿಸಿದ್ದಾರೆ. 50 ಮಂದಿ ಮೃದಂಗ ತಯಾರಕರು ಕೂಡಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಇಡೀ ವಿವಾದ ಮನುಧರ್ಮ ಇನ್ನೂ ಸಮಾಜದಲ್ಲಿ ಅಸ್ತಿತ್ವದಲ್ಲಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಥೋಲ್ ತಿರುಮಲವನ್ ಹೇಳಿದ್ದಾರೆ.







