ಗಾಂಧಿ, ನೆಹರೂ ಜತೆ ಹೆಗಡೆ ‘ಸ್ವಾತಂತ್ರ್ಯ ಹೋರಾಟ’ ನಡೆಸುತ್ತಿದ್ದರು: ಸಿದ್ದರಾಮಯ್ಯ ಲೇವಡಿ

ಹುಬ್ಬಳ್ಳಿ, ಫೆ.3: ‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ನೆಹರೂ, ವಲ್ಲಭಬಾಯಿ ಪಟೇಲ್ ಜತೆ ಅನಂತಕುಮಾರ ಹೆಗಡೆ ಸ್ವಾತಂತ್ರ್ಯ ಹೋರಾಟ ನಡೆಸುತ್ತಿದ್ದರು. ಹೀಗಾಗಿಯೇ ಅವರು ಅಹಿಂಸೆಯಿಂದ ಸ್ವಾತಂತ್ರ್ಯ ಬಂದಿಲ್ಲ ಎಂದು ಕರಾರುವಾಕ್ಕಾಗಿ ಹೇಳಿಕೆ ನೀಡಿದ್ದಾರೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಅಹಿಂಸೆಯಿಂದ ಸ್ವಾತಂತ್ರ್ಯ ಬಂದಿಲ್ಲ. ಸ್ವಾತಂತ್ರ್ಯ ಹೋರಾಟಗಾರರು ಎಂದು ಹೇಳಿಕೊಳ್ಳುತ್ತಿರುವವರು ಮತ್ತು ಪ್ರಗತಿಪರರು ಎಡಬಿಡಂಗಿಗಳು’ ಎಂಬ ಅನಂತಕುಮಾರ ಹೆಗಡೆ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅನಂತಕುಮಾರ್ ಹೆಗಡೆಗೆ ನಾಚಿಕೆ, ಮಾನ-ಮರ್ಯಾದೆ ಇಲ್ಲ. ಕೂಡಲೇ ಕೇಂದ್ರ ಸರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಸಂವಿಧಾನ ಬದಲಾವಣೆ ಮಾಡುವ ಹೇಳಿಕೆ ನೀಡಿ ಕೇಂದ್ರದ ಸಚಿವರಾಗಿದ್ದರು. ಇದೀಗ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಲಘುವಾಗಿ ಮಾತನಾಡಿರುವುದು ಸಲ್ಲ ಎಂದು ಆಕ್ಷೇಪಿಸಿದರು.
ಸ್ವಾತಂತ್ರ್ಯ ಹೋರಾಟಗಾರರು ಕಾರಾಗೃಹದಲ್ಲಿದ್ದು, ಪ್ರಾಣ ಕಳೆದುಕೊಂಡು, ಕುಟುಂಬ ತ್ಯಜಿಸಿ ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ. ಅವರ ಬಗ್ಗೆ ಗೌರವದಿಂದ ಮಾತನಾಡಬೇಕೆಂದ ಅವರು, ಸ್ವಾತಂತ್ರ್ಯ ಹೋರಾಟಗಾರರು ಇಲ್ಲದಿದ್ದರೆ, ಸಂವಿಧಾನ ಇಲ್ಲದಿದ್ದರೆ ಅನಂತಕುಮಾರ್ ಹೆಗಡೆ ಸಂಸದ ಆಗುತ್ತಿದ್ದರೇ? ಎಂದು ಪ್ರಶ್ನಿಸಿದರು.
ದೇಶದಲ್ಲಿ ಸಂವಿಧಾನ ಬಂದ ಮೇಲೆಯೇ ಎಲ್ಲರಿಗೂ ಮತ ಹಾಕುವ ಹಕ್ಕು ಸಿಕ್ಕಿದೆ. ಸಂವಿಧಾನ ಓದದೆ ಇವರೆಲ್ಲ ಸಂಸದರು ಏಕೆ ಆಗಿದ್ದಾರೋ ಗೊತ್ತಾಗುತ್ತಿಲ್ಲ. ಗೋಡ್ಸೆ ಹಾಗೂ ಸಾವರ್ಕರ್ ಪೂಜೆ ಮಾಡುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ವಾಗ್ದಾಳಿ ನಡೆಸಿದರು.
ಸ್ವಾತಂತ್ರ್ಯ ಹೋರಾಟದ ಬಗ್ಗೆ ಇವರಿಗೇನು ಗೊತ್ತು? ಸ್ವಾತಂತ್ರ್ಯ ಹೋರಾಟದಲ್ಲಿ ಬಲಿಯಾದವರ ಹೆಸರನ್ನು ಅನಂತಕುಮಾರ್ ಹೆಗಡೆ ಹೇಳಲಿ ನೋಡೋಣ. ಗಾಂಧೀಜಿ ಎಷ್ಟು ವರ್ಷಗಳ ಕಾಲ ಜೈಲಿನಲ್ಲಿದ್ದರು ಎಂಬುವುದು ಹೆಗಡೆಗೆ ಗೊತ್ತಿಲ್ಲ. ನಾನು 1947ರ ಆಗಸ್ಟ್ 3ರಂದು ಸ್ವಾತಂತ್ರ್ಯ ಪೂರ್ವದಲ್ಲೇ ಹುಟ್ಟಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಇನ್ನು ಸ್ವಾತಂತ್ರ್ಯ ಬಂದ ದಿನಕ್ಕೆ 12ರ ಹಸಿಗೂಸಿನ ಈತ, ಸ್ವಾತಂತ್ರ್ಯದ ಬಗ್ಗೆ ಮಾತನಾಡಲು ಅದನ್ನೇ ಅರ್ಹತೆಯೆಂದು ತಿಳಿದಿದ್ದರೆ, ಈ ಸಿದ್ದಣ್ಣನನ್ನು ದಿವಾಳಿಯೆದ್ದ ಮನಸ್ಸಿನ ಸಾಕ್ಷಿ-ಪ್ರಜ್ಞೆ ಎನ್ನಬಹುದಲ್ಲವೇ? ಸಿಎಎ ಬಗ್ಗೆ ಹುಟ್ಟಿನ ದಾಖಲೆ ನೀಡಲು ಆಗುವುದಿಲ್ಲವೆಂದ ಈ ಸಿದ್ದಣ್ಣ ಈಗ ತನ್ನೆಲ್ಲ ದಾಖಲೆಗಳನ್ನು ಸರಿ ಮಾಡಿಸಿಕೊಂಡು ಒದರಲಿಕ್ಕೆ ಪ್ರಾರಂಭಿಸಿರುವುದು, ಪ್ರಧಾನಿ ಮೋದಿಯವರು ತೆಗೆದುಕೊಂಡ ಕ್ರಮ ಸಾರ್ಥಕವಾಯ್ತಲ್ಲವೇ???’
-ಅನಂತಕುಮಾರ್ ಹೆಗಡೆ , ಸಂಸದ(ಟ್ವೀಟ್)







