ಉಪ್ಪಿನಂಗಡಿ: ತಾಲೂಕು ಮಟ್ಟದ ಯುವ ಒಕ್ಕಲಿಗ ಗೌಡರ ಕ್ರೀಡೋತ್ಸವ

ಉಪ್ಪಿನಂಗಡಿ: ಪ್ರತಿಯೊಂದರಲ್ಲೂ `ಲಾಕ್ ಸಿಸ್ಟಮ್'ನಂತೆ ಕಟ್ಟು ನಿಟ್ಟು ಮಾಡುವುದರಿಂದ ಮಕ್ಕಳ ಬದುಕು, ಮನಸ್ಸುಗಳು ಹಾಳಾಗುವಂತಾಗಿವೆ. ಮಕ್ಕಳೆದುರು ನಾವು ಗೌಪ್ಯತೆ ಪ್ರದರ್ಶಿಸಿದಾಗ ಅವರಿಗೆ ಅದನ್ನು ತಿಳಿಯುವ ಕುತೂಹಲವೂ ಜಾಸ್ತಿಯಾಗುತ್ತದೆ. ಆದ್ದರಿಂದ ಮಕ್ಕಳೆದುರು ಮನಸ್ಸು ಬಿಚ್ಚಿ ನಾವು ಮಾತನಾಡಬೇಕಲ್ಲದೆ, ಅವರೆದುರು ನಮ್ಮ ಬದುಕನ್ನು ಪಾರದರ್ಶಕವಾಗಿ ತೆರೆದಿಡಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಸರ್ವೋದಯ ಪ್ರೌಢಶಾಲೆಯಲ್ಲಿ ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಸಹಯೋಗದೊಂದಿಗೆ ನಡೆದ ತಾಲೂಕು ಮಟ್ಟದ ಯುವ ಒಕ್ಕಲಿಗ ಗೌಡರ ಕ್ರೀಡೋತ್ಸವ- 2020 ದಲ್ಲಿ ಅವರು ಆಶೀರ್ವಚನ ನೀಡುತ್ತಿದ್ದರು.
ಮಕ್ಕಳಿಗೆ ಸ್ಫೂರ್ತಿ ತುಂಬುವ ಕೆಲಸ ಪೋಷಕರಿಂದಾಗಬೇಕಲ್ಲದೆ, ಅವರನ್ನು ದೈಹಿಕ ಹಾಗೂ ಮಾನಸಿಕವಾಗಿ ಬಲಾಢ್ಯರನ್ನಾಗಿಸಬೇಕು. ಇದಕ್ಕೆ ಕ್ರೀಡೆ ಉತ್ತಮ ಪರಿಹಾರವಾಗಿದ್ದು, ಇದರಿಂದ ಉತ್ತಮ ಆರೋಗ್ಯವೂ ಸಾಧ್ಯವಾಗುತ್ತದೆ. ಉತ್ತಮವಾಗಿ ನೋಡುವುದು, ಆಡುವುದು, ಮಾಡುವುದು ಕಲಿತ ಮಗು ಸಮಾಜದ ಸಂಪತ್ತಾಗಲು ಸಾಧ್ಯ. ಆಧುನಿಕತೆಯ ಭರಾಟೆಯಲ್ಲಿ ಮಗುವನ್ನು ಕೇವಲ ಪಠ್ಯಕ್ಕೆ ಮಾತ್ರ ಸೀಮಿತಗೊಳಿಸದೆ, ಹೊರ ಪ್ರಪಂಚದ ಸವಿಯನ್ನು ಅವರಿಗೆ ಅನುಭವಿಸಲು ಅವಕಾಶ ನೀಡಬೇಕು ಎಂದರು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ಒಕ್ಕಲಿಗ ಗೌಡ ಸಮಾಜವು ಸ್ವಾಭಿಮಾನಿ ಬದುಕು ನಡೆಸುವ ಸಮಾಜವಾಗಿದ್ದು, ಅನ್ನ ನೀಡುವುದು ಮಾತ್ರವಲ್ಲ. ಆಳ್ವಿಕೆಗೂ ಸೈ ಎಂದು ತೋರಿಸಿಕೊಟ್ಟವರು. ಸ್ವಾತಂತ್ರ್ಯ ಹೋರಾಟಗಾರ ಕೂಜುಗೋಡು ವೆಂಕಟರಮಣ ಗೌಡರು ಸೇರಿದಂತೆ ಈ ಸಮಾಜದ ನೂರಾರು ಮಂದಿ ಈ ದೇಶಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ತಾನು ಬದುಕಬೇಕು. ಇನ್ನೊಬ್ಬರನ್ನೂ ಬದುಕಲು ಬಿಡಬೇಕು ಎನ್ನುವ ಮನೋಭಾವನೆಯ ಮೂಲಕ ಎಲ್ಲರನ್ನೂ ಪ್ರೀತಿ- ವಿಶ್ವಾಸದಿಂದ ನೋಡುವ ಕೆಲಸ ಒಕ್ಕಲಿಗ ಗೌಡ ಸಮಾಜ ದಿಂದಾಗುತ್ತಿದೆ. ದೇಶ ಭಕ್ತಿಯ ಜೊತೆಗೆ ದೇಶ ಶಕ್ತಿಯ ಇನ್ನಷ್ಟು ಪ್ರತಿಭೆಗಳು ಈ ಸಮಾಜದಿಂದ ಹೊರಬರಬೇಕು ಎಂದರು.
ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಮೋಹನ ಗೌಡ ಇಡ್ಯಡ್ಕ ಮಾತನಾಡಿದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಎಚ್. ಡಿ. ಶಿವರಾಮ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಯಶವಂತ ಜಿ. ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮಾಜಿ ಅಧ್ಯಕ್ಷ ಲೊಕೇಶ ಗೌಡ ಬಜತ್ತೂರು, ಕೊೈಲ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಅಧೀಕ್ಷಕಿ ರೂಪಾಕ್ಷಿ, ಕೋಡಿಂಬಾಡಿ ತಾ.ಪಂ. ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ. ಗೌಡ, ಶಿಕ್ಷಕಿ ರುಕ್ಮಿಣಿ, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಜಯಂತ ವೈ, ಪ್ರಮುಖರಾದ ಸುಂದರ ಗೌಡ ಅರ್ಬಿ, ಲೊಕೇಶ್ ಗೌಡ ಕಿಂಡೋವು, ಲಿಂಗಪ್ಪ ಗೌಡ ಕಣಿಯ, ಪುರುಷೋತ್ತಮ ಮುಂಗ್ಲಿಮನೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ ಮುಕುಂದ ಗೌಡ ಬಜತ್ತೂರು, ಜಿ.ಪಂ. ಮಾಜಿ ಸದಸ್ಯ ಕೇಶವ ಗೌಡ ಬಜತ್ತೂರು, ಸಿಎ ಬ್ಯಾಂಕ್ ನಿರ್ದೇಶಕ ರಾಮಚಂದ್ರ ಮಣಿಯಾಣಿ, ನ್ಯಾಯವಾದಿ ಅನಿಲ್ ಕುಮಾರ್ ದಡ್ಡು, ಸಂಘದ ತಾಲೂಕು ಸಮಿತಿಯ ಮಾಜಿ ಉಪಾಧ್ಯಕ್ಷ ಶಿವಣ್ಣ ಗೌಡ ಬಿದಿರಾಡಿ ಪ್ರಮುಖರಾದ ಸುರೇಶ್ ಅತ್ರಮಜಲು, ಕೃಷ್ಣಪ್ಪ ಗೌಡ ಬೊಳ್ಳಾವು, ಆನಂದ ಗೌಡ ಕುಂಟಿನಿ, ಲಕ್ಷ್ಮಣ ಗೌಡ ನೆಡ್ಚಿಲ್, ಹರೀಶ್ ಗೌಡ ಪಟ್ಲ, ಉಮೇಶ್ ಗೌಡ ಓಮಂದೂರು, ಶಶಿಧರ ನೆಕ್ಕಿಲಾಡಿ ಮತ್ತಿತರರು ಉಪಸ್ಥಿತರಿದ್ದರು.
ಪೆರಿಯಡ್ಕದ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರದಿಂದ ಕ್ರೀಡಾಜ್ಯೋತಿ ತರಲಾಯಿತು. ರಾಷ್ಟ್ರಮಟ್ಟದ ಕ್ರೀಡಾಪಟು ಪ್ರತೀಕ್ಷ್ ಗೌಡ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯನ್ನು, ಸಾಧಕರನ್ನು ಸನ್ಮಾನಿಸಲಾಯಿತು. ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರಾಧಾಕೃಷ್ಣ ನಂದಿಲ ಸ್ವಾಗತಿಸಿದರು. ಉಪ್ಪಿನಂಗಡಿ ವಲಯಾಧ್ಯಕ್ಷ ಕೇಶವ ಗೌಡ ರಂಗಾಜೆ ವಂದಿಸಿದರು. ಶಿಕ್ಷಕರಾದ ಹರ್ಷಿತಾ ಹಾಗೂ ಶಾಂತರಾಮ ಓಡ್ಲ ಕಾರ್ಯಕ್ರಮ ನಿರೂಪಿಸಿದರು.







