ಬೆಂಗಳೂರು: ನಿವೃತ್ತ ಹಿರಿಯ ಸರಕಾರಿ ಅಧಿಕಾರಿ ಅಬ್ದುಲ್ಲಾ ಪೆರ್ವಾಡ್ ನಿಧನ

ಬೆಂಗಳೂರು, ಫೆ. 3: ನಿವೃತ್ತ ಹಿರಿಯ ಸರಕಾರಿ ಅಧಿಕಾರಿ ಅಬ್ದುಲ್ಲಾ ಪೆರ್ವಾಡ್ (83) ಸೋಮವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ನಿವೃತ್ತ ಐಪಿಎಸ್ ಅಧಿಕಾರಿ ಬಿ.ಎಂ. ಬೀರಾ ಮೊಯ್ದಿನ್ ಅವರ ಪುತ್ರಿ ಝುಲೇಖಾರನ್ನು ವಿವಾಹವಾಗಿದ್ದ ಅಬ್ದುಲ್ಲಾ ಪೆರ್ವಾಡ್ ಅವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೂಲತಃ ಕುಂಬಳೆ ಸಮೀಪದ ಮೊಗ್ರಾಲ್ ನಲ್ಲಿ ಸುಶಿಕ್ಷಿತ ಕುಟುಂಬದಲ್ಲಿ ಹುಟ್ಟಿ ಬೆಳೆದ ಅಬ್ದುಲ್ಲಾ ಪೆರ್ವಾಡ್, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಬಳಿಕ ಬೆಂಗಳೂರಿನಲ್ಲಿ ನೆಲೆಸಿ ಅಲ್ಲೇ ಕರ್ತವ್ಯ ನಿರ್ವಹಿಸತೊಡಗಿದ್ದರು. ಆದಾಯ ತೆರಿಗೆ ಇಲಾಖೆಯಲ್ಲಿ ಸೇವೆ ಆರಂಭಿಸಿದ ಅವರು ದ.ಕ. ಜಿಲ್ಲಾ ಪಂಚಾಯತ್ ನಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿದ್ದರು. ಬಳಿಕ ರಾಜ್ಯ ಹೈಕೋರ್ಟ್ ನ ಫೈನಾನ್ಸಿಯಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರಲ್ಲದೆ, ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಬೆಂಗಳೂರಿನ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ನ ಸದಸ್ಯರಾಗಿದ್ದ ಅಬ್ದುಲ್ಲಾ ಪೆರ್ವಾಡ್ ಸಮಾಜಸೇವೆಯಲ್ಲೂ ಗುರುತಿಸಿಕೊಂಡಿದ್ದರು. ಮೃತರ ಅಂತ್ಯ ಸಂಸ್ಕಾರವು ಮಂಗಳವಾರ ಅಸರ್ ನಮಾಝ್ ಬಳಿಕ ಬೆಂಗಳೂರಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ: ಅಬ್ದುಲ್ಲಾ ಪೆರ್ವಾಡ್ ಅವರ ನಿಧನಕ್ಕೆ ಟೀಕೇಸ್ ಗ್ರೂಪ್ ನ ಉಮರ್ ಟೀಕೆ, ನ್ಯಾಯವಾದಿ ಶಕೀಲ್ ಪಿ.ಎಚ್. ಮತ್ತಿತರರು ಸಂತಾಪ ಸೂಚಿಸಿದ್ದಾರೆ.





