ಮಣಿಪಾಲ: ಫೆ.4ರಂದು ಕ್ಯಾನ್ಸರ್ ಕುರಿತು ವಿಶೇಷ ಕಾರ್ಯಕ್ರಮ
ಮಣಿಪಾಲ, ಫೆ.3: ವಿಶ್ವ ಕ್ಯಾನ್ಸರ್ ದಿನಾಚರಣೆಯ ಪ್ರಯುಕ್ತ ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪೀಡಿತ ರೋಗಿಗಳು ಹಾಗೂ ರೋಗಿ ಗಳನ್ನು ಆರೈಕೆ ಮಾಡುವವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಫೆ.4ರ ಅಪರಾಹ್ನ 2 ರಿಂದ 4 ಗಂಟೆಯವರೆಗೆ ಆಯೋಜಿಸಲಾ ಗಿದೆ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
ಕ್ಯಾನ್ಸರ್ ರೋಗದ ಕುರಿತಂತೆ ಜನಸಾಮಾನ್ಯರಲ್ಲಿರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುವ ಪ್ರಯತ್ನ ಇದಾಗಿದ್ದು, ಕಾರ್ಯಕ್ರಮದಲ್ಲಿ ಕ್ಯಾನ್ಸರ್ ತಜ್ಞರು, ಮಾನಸಿಕ ಕ್ಯಾನ್ಸರ್ ತಜ್ಞರು, ಪಥ್ಯಾಹಾರ ತಜ್ಞರು ಹಾಗೂ ಸಮಾಜ ಸೇವಕರು ಕ್ಯಾನ್ಸರ್ ಆರೈಕೆಗೆ ಸಂಬಂಧಿಸಿದಂತೆ ವಿವಿಧ ಅಂಶಗಳ ಕುರಿತು ಮಾತನಾಡಲಿದ್ದು, ಸಂವಾದವನ್ನೂ ನಡೆಸಲಿದ್ದಾರೆ.
ಚಿಕಿತ್ಸೆಯಿಂದ ಗುಣಮುಖರಾದ ಹಾಗೂ ಈಗಲೂ ಚಿಕಿತ್ಸೆ ಪಡೆಯುತ್ತಿರುವ ಅನೇಕ ಕ್ಯಾನ್ಸರ್ ರೋಗಿಗಳು, ಅವರಿಗೆ ಆರೈಕೆ ನೀಡುತ್ತಿರುವವರು ಕ್ಯಾನ್ಸರ್ ಚಿಕಿತ್ಸೆ ಹಾಗೂ ಇತರ ವಿಷಯಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಸಾರ್ವಜನಿಕರು ಈ ಉಚಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ಯಾನ್ಸರ್ ಕುರಿತಂತೆ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಎಂದು ಡಾ.ಶೆಟ್ಟಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 9980854700/08202922316ನ್ನು ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.







