ಎಲ್ಲೈಸಿ ಷೇರು ಮಾರಾಟ ಪ್ರಸ್ತಾಪ: ಫೆ.4ರಂದು ವಿಮಾ ನೌಕರರ ಮುಷ್ಕರ
ಉಡುಪಿ, ಫೆ. 3: ಕಳೆದ ಶನಿವಾರ ಮಂಡಿಸಿ ಕೇಂದ್ರ ಸರಕಾರದ 2020-21ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವರು ಭಾರತೀಯ ಜೀವವಿಮಾ ನಿಗಮ (ಎಲ್ಲೈಸಿ)ದಲ್ಲಿ ಸರಕಾರ ಹೊಂದಿರುವ ಅಂಶಿಕ ಪಾಲನ್ನು ಮಾರಾಟ ಮಾಡುವ ನಿರ್ಧಾರವನ್ನು ಪ್ರಕಟಿಸಿರು ವುದನ್ನು ಖಂಡಿಸಿ ಉಡುಪಿ ವಿಭಾಗೀಯ ಕಚೇರಿಯ ನೌಕರರು, ಅಧಿಕಾರಿಗಳು ಮತ್ತು ಅಭಿವೃದ್ಧಿ ಅಧಿಕಾರಿಗಳು ಪ್ರತಿಭಟನೆ ನಡೆಸಲಿದ್ದಾರೆ.
1956ರಲ್ಲಿ ಸರಕಾರವು ಹೂಡಿರುವ ಐದು ಕೋಟಿ ರೂ. ಬಂಡವಾಳಕ್ಕೆ ಎಲ್ಲೈಸಿ ಇಲ್ಲಿಯವರೆಗೆ ಸರಕಾರಕ್ಕೆ 26,005.38 ಕೋಟಿ ರೂ. ಲಾಭಾಂಶ ನೀಡಿದೆ. ಈ ದೇಶದ ಮೂಲಭೂತ ಸೌಕರ್ಯಗಳಲ್ಲಿ ಎಲ್ಲೈಸಿ ಹೂಡಿಕೆಯನ್ನು ಮಾಡಿದ್ದು ದೇಶದ ಪ್ರಗತಿಗೆ ತನ್ನದೇ ಕೊಡುಗೆಯನ್ನು ನೀಡಿದೆ. ಇಂತಹ ಸಂಸ್ಥೆಯನ್ನು ಸರಕಾರವು ಖಾಸಗೀಕರಣ ಮಾಡುವ ಪ್ರಕ್ರಿಯೆಯ ಭಾಗವಾಗಿರುವ ಷೇರು ಮಾರಾಟ ಪ್ರಕ್ರಿಯೆಯನ್ನು ವಿರೋಧಿಸಿ ಫೆ.4ರ ಅಪರಾಹ್ನ 12ರಿಂದ 1 ಗಂಟೆಯವರೆಗೆ ಹೊರನಡಿಗೆ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಈ ಮುಷ್ಕರದಲ್ಲಿ ಅಖಿಲ ಭಾರತ ವಿಮಾ ನೌಕರರ ಸಂಘ, ಎಲ್‌ಐಸಿ ಅಧಿಕಾರಿಗಳ ಸಂಘ ಮತ್ತು ಎಲ್‌ಐಸಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಸದಸ್ಯರು ಭಾಗವಹಿಸಲಿದ್ದಾರೆ. ಈ ಮುಷ್ಕರದ ಪ್ರಯುಕ್ತ ಅಜ್ಜರಕಾಡಿನಲ್ಲಿರುವ ಎಲ್ಲೈಸಿ ವಿಭಾಗೀಯ ಕಛೇರಿಯ ಆವರಣದಲ್ಲಿ ಅಪರಾಹ್ನ 12 ಗಂಟೆಗೆ ಸರಿಯಾಗಿ ಮತಪ್ರದರ್ಶನ ನಡೆಯಲಿದೆ ಎಂದು ಉಡುಪಿ ವಿಭಾಗ ವಿಮಾ ನೌಕರರ ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.





