ಸಂಸತ್ತಿನಲ್ಲಿ ‘ಜೈ ಶ್ರೀರಾಂ’ ಹೇಳಿ: ಲೋಕ ಸಭೆಯಲ್ಲಿ ವಿಪಕ್ಷಗಳಿಗೆ ಬಿಜೆಪಿ ಮುಖಂಡನ ಆಗ್ರಹ

ಹೊಸದಿಲ್ಲಿ, ಫೆ.3: ಜೈ ಶ್ರೀರಾಂ ಘೋಷಣೆ ಯಾವುದೇ ಧರ್ಮದ ಸಂಕೇತವಲ್ಲ, ಇದು ದೇಶದ ಸಂಸ್ಕೃತಿಯ ಹೆಗ್ಗುರುತಾಗಿದೆ. ವಿಪಕ್ಷಗಳು ವೋಟ್‌ಬ್ಯಾಂಕ್ ರಾಜಕೀಯ ಬಿಟ್ಟು ಸಂಸತ್ತಿನಲ್ಲಿ ಜೈಶ್ರೀರಾಂ ಪಠಿಸಬೇಕು ಎಂದು ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾರ್ಪಣೆ ಗೊತ್ತುವಳಿ ಚರ್ಚೆಯಲ್ಲಿ ಮಾತನಾಡಿದ ವರ್ಮ, ಸಂವಿಧಾನದ ಮೂಲಪ್ರತಿಯು ಶ್ರೀರಾಮ, ಕೃಷ್ಣ ಮತ್ತು ಹನುಮಂತನ ಚಿತ್ರವನ್ನು ಹೊಂದಿತ್ತು ಎಂದು ಹೇಳಿದರು. ವರ್ಮ ಮಾತನಾಡಲು ಆರಂಭಿಸುತ್ತಿದ್ದಂತೆಯೇ ವಿಪಕ್ಷದ ಬಹುತೇಕ ಸದಸ್ಯರು ಸಭಾತ್ಯಾಗ ನಡೆಸಿದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ. ನೀವೆಲ್ಲಾ ಜೈ ಶ್ರೀರಾಂ ಎಂದು ಪಠಿಸಿದರೆ ನಿಮ್ಮೆಲ್ಲಾ ಪಾಪ ಪರಿಹಾರವಾಗುತ್ತದೆ ಎಂದು ವಿಪಕ್ಷದ ಸದಸ್ಯರನ್ನುದ್ದೇಶಿಸಿ ವರ್ಮ ಹೇಳಿದರು.
ಶಾಹೀನ್‌ಬಾಗ್‌ನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುವವರು ಅಸ್ಸಾಂ ಹಾಗೂ ಜಮ್ಮು ಮತ್ತು ಕಾಶ್ಮೀರ ಭಾರತದಿಂದ ಪ್ರತ್ಯೇಕವಾಗಬೇಕೆಂದು ಬಯಸುತ್ತಿದ್ದಾರೆ. ಅವರು ಜಿನ್ನಾರ ಆಝಾದಿ ಬಯಸುತ್ತಿದ್ದಾರೆ. ಇದು ರಾಜೀವ್ ಫಿರೋಝ್‌ಖಾನರ ಸರಕಾರವಲ್ಲ. ಪೌರತ್ವ ಕಾಯ್ದೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ವರ್ಮ ಹೇಳಿದರು. ರಾಜೀವರ ತಾಯಿ ಇಂದಿರಾ ನೆಹರೂ ಅವರು ಮುಸ್ಲಿಮ್ ವ್ಯಕ್ತಿ ಫಿರೋಝ್ ಖಾನರನ್ನು ವಿವಾಹವಾಗಿದ್ದರು ಎಂಬ ಪ್ರಮಾಣೀಕರಿಸದ ವರದಿಯನ್ನು ಉಲ್ಲೇಖಿಸಿ ವರ್ಮ ಈ ಹೇಳಿಕೆ ನೀಡಿದ್ದಾರೆ.







