ಬಜೆಟ್ ಅನುದಾನದಲ್ಲಿ ಕೊರತೆ: ಮಿಲಿಟರಿ ಆಧುನೀಕರಣಕ್ಕೆ ಹಿನ್ನಡೆ
ಪರ್ಯಾಯ ಮಾರ್ಗದ ಹುಡುಕಾಟದಲ್ಲಿ ರಕ್ಷಣಾ ಸಚಿವಾಲಯ

ಫೈಲ್ ಚಿತ್ರ
ಹೊಸದಿಲ್ಲಿ, ಜ.3: 2020-21ನೇ ಸಾಲಿನ ರಕ್ಷಣಾ ಬಜೆಟ್ನಲ್ಲಿ ಅಲ್ಪ ಪ್ರಮಾಣದ ಹೆಚ್ಚಳವು ರಕ್ಷಣಾ ಸಚಿವಾಲಯಕ್ಕೆ ಇಕ್ಕಟ್ಟಿನ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಮಿಲಿಟರಿಯ ಆಧುನೀಕರಣಕ್ಕೆ ದಾಪುಗಾಲಿಡುತ್ತಿರುವ ರಕ್ಷಣಾ ಇಲಾಖೆಗೆ ಈ ಸಲದ ಬಜೆಟ್ನಲ್ಲಿ ನೀಡಿದ ಅನುದಾನವು ನಿರಾಸೆಯುಂಟು ಮಾಡಿದೆ. ಇದರಿಂದಾಗಿ ಸೇನೆಯ ಆಧುನೀಕರಣಕ್ಕೆ ಅದು ಪರ್ಯಾಯ ದಾರಿಗಳನ್ನು ಹುಡುಕಬೇಕಾದ ಅನಿವಾರ್ಯತೆಯುಂಟಾಗಿದೆ ಎಂದು The indian express ಸುದ್ದಿಜಾಲ ತಾಣ ವರದಿ ಮಾಡಿದೆ.
ಬಜೆಟ್ಗೆ ರಕ್ಷಣಾ ಇಲಾಖೆಗೆ ನಿರೀಕ್ಷಿಸಿದಷ್ಟು ಅನುದಾನ ದೊರೆಯದಿರುವುದು ತೊಂದರೆಯುಂಟು ಮಾಡಿದೆ ಎಂದು ರಕ್ಷಣಾ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ‘‘ ಇಲ್ಲಿ ಎರಡು ವಾಸ್ತವ ಸಂಗತಿಗಳನ್ನು ಗಮನಿಸೆಬೇಕಾಗುತ್ತದೆ. ಮೊದಲನೆಯದಾಗಿ ರಕ್ಷಣಾ ಸಚಿವಾಲಯಕ್ಕೆ ನೀಡುವ ಬಜೆಟ್ ಅನುದಾನದ ಶೇಕಡ 57ರಷ್ಟು ಮೊತ್ತವು ವೇತನ ಹಾಗೂ ಪಿಂಚಣಿಗೆ ಹೋಗುತ್ತದೆ. ನಿವೃತ್ತ ರಕ್ಷಣಾ ಸಿಬ್ಬಂದಿಗಳ ಪಿಂಚಣಿಗಾಗಿಯೇ ಕೇಂದ್ರ ಸರಕಾರದ ಒಟ್ಟು ವೆಚ್ಚದ 4.4 ಶೇಕಡ ಬೇಕಾಗುತ್ತದೆ. ಎರಡನೆಯದಾಗಿ ಕೇಂದ್ರ ಸರಕಾರದ ಬಂಡವಾಳ ವೆಚ್ಚದ ಕೇವಲ ಮೂರನೇ ಒಂದು ಭಾಗವು ಸಚಿವಾಲಯದ ರಕ್ಷಣಾ ವೆಚ್ಚಕ್ಕೆ ವಿನಿಯೋಗವಾಗುತ್ತದೆ ಎಂದು ಅವರು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ರಕ್ಷಣಾ ಸಚಿವಾಲಯಕ್ಕೆ ಅರ್ಥಿಕ ನಿಧಿಯ ಕೊರತೆಯುಂಟಾಗಿರುವ ಕಾರಣ ಸೇನಾಪಡೆಗಳ ಆಧುನೀಕರಣಕ್ಕೆ ಹಿನ್ನಡೆಯುಂಟಾಗಿದೆ ಎಂದು ಅವರು ಹೇಳಿದ್ದಾರೆ. ರಕ್ಷಣೆ ಕುರಿತ ಸಂಸದೀಯ ಸ್ಥಾಯಿ ಸಮಿತಿ ಕೂಡಾ ತನ್ನ ವರದಿಗಳಲ್ಲಿ ಈ ವಿಷಯದ ಬಗ್ಗೆ ಸರಕಾರದ ಗಮನಸೆಳೆದಿತ್ತು. ಆದರೆ ದೇಶ ಎದುರಿಸುತ್ತಿರುವ ತೀವ್ರ ಆರ್ಥಿಕ ಹಿಂಜರಿತದಿಂದಾಗಿ ಚಾಲ್ತಿಯಲ್ಲಿ ರಕ್ಷಣಾ ಗುತ್ತಿಗೆ ಒಪ್ಪಂದಗಳ ಜಾರಿಗೆ ನಿಧಿ ಪೂರೈಕೆಯಾಗುತ್ತಿಲ್ಲ ಹಾಗೂ ಮಿಲಿಟರಿ ಉಪಕರಣಗಳ ಖರೀದಿಗಾಗಿ ಹೊಸ ಒಪ್ಪಂದಗಳಿಗೆ ಸಹಿಹಾಕಲಾಗುತ್ತಿಲ್ಲ.
‘‘ಸೇನೆಯ ಉಪಕರಣಗಳ ಬತ್ತಳಿಕೆಯಲ್ಲಿನ ಶೇ.30 ಹಳೆಯ ಕಾಲದ ಉಪಕರಣಗಳು ಶೇ.40 ಪ್ರಸಕ್ತ ಕಾಲದ ಉಪಕರಣಗಳು ಹಾಗೂ ಶೇ.30ರಷ್ಟು ಅತ್ಯಾಧುನಿಕ ಉಪಕರಣಗಳಿರಬೇಕು. ಆದರೆ ಈ 30:40: 30 ಅನುಪಾತವು ವರ್ಷದಿಂದ ವರ್ಷಕ್ಕೆ ಕಳಪೆಯಾಗುತ್ತಾ ಬರುತ್ತಿದೆ. ನಾಳಿನ ಯುದ್ಧಗಳನ್ನು ನಾವು ನಿನ್ನೆಯ ಸಾಮರ್ಥ್ಯದೊಂದಿಗೆ ಗೆಲ್ಲಲು ಸಾಧ್ಯವಿದೆಯೇ ’’ಎಂದವರು ಪ್ರಶ್ನಿಸಿದ್ದಾರೆ.
‘‘ಸಾಮಾನ್ಯವಾಗಿ ಪ್ರತಿ ಸಾಲಿನಲ್ಲಿಯೂ ಬಜೆಟ್ನಲ್ಲಿ ಮಿಲಿಟರಿಯ ಆಧುನೀಕರಣಕ್ಕೆ ನೀಡುವ ಅನುದಾನದಲ್ಲಿ ಶೇ.5ರಷ್ಟು ಹೆಚ್ಚಳವಾಗುತ್ತದೆ. ಆದರೆ ಈ ಸಲದ ಬಜೆಟ್ನಲ್ಲಿ ಅದು 3 ಶೇಕಡಕ್ಕಿಂತಲೂ ಕಡಿಮೆಯಾಗಿದೆ. ಇದರಿಂದಾಗಿ ಸೇನೆಯ ಆಧುನೀಕರಣಕ್ಕೆ ನೂತನ ಯೋಜನೆಗಳನ್ನು ಹಮ್ಮಿಕೊಳ್ಳಲು ಕಷ್ಟಕರವಾಗುತ್ತಿದೆ ’ಎಂದು ರಕ್ಷಣಾ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಿಧಿಯ ಕೊರತೆಯಿಂದಾಗಿ ಈಗ ಕೈಗೊಂಡಿರುವ ಯೋಜನೆಗಳನ್ನು ಕೂಡಾ ಪೂರ್ತಿಗೊಳ್ಳಲು ವಿಳಂಬವಾಗುತ್ತಿದೆ. ಇದಕ್ಕೆ ಪರ್ಯಾಯ ಮಾರ್ಗಗಳನ್ನು ನಾವು ಶೋಧಿಸಬೇಕಾಗಿದೆ’’ ಎಂದು ಅವರು ವಿವರಿಸಿದ್ದಾರೆ.
ರಕ್ಷಣಾ ನಿಧಿಗಳ ಪೂರೈಕೆಯಲ್ಲಿ ನಿರಂತರವಾದ ಅಸಮರ್ಪಕತೆಯುಂಟಾಗಿರುವ ಕುರಿತು ರಕ್ಷಣಾ ಸಚಿವಾಲಯದಿಂದ ಅಹವಾಲು ಸ್ವೀಕರಿಸಿರುವುದಾಗಿ ಲೋಕಸಭೆಯಲ್ಲಿ ಮಂಡಿಸಲಾದ ಹಣಕಾಸು ಆಯೋಗದ 2020-21ನೇ ಸಾಲಿನ ಮಧ್ಯಂತರ ವರದಿಯು ತಿಳಿಸಿದೆ. ರಕ್ಷಣಾ ಇಲಾಖೆಗೆ ಪ್ರಸಕ್ತ ಒದಗಿಸಲಾಗುತ್ತಿರುವ ನಿಧಿಯು ಅಸಮರ್ಪಕವಾಗಿದೆ. ಹೀಗಾಗಿ ನಾವು ಹೆಚ್ಚುವರಿ ನಿಧಿಯನ್ನು ಸಂಗ್ರಹಿಸಲು ಪರ್ಯಾಯ ಮೂಲಗಳನ್ನು ಹುಡುಕುವ ಅಗತ್ಯವುಂಟಾಗಿದೆ ಎಂದು ಅದು ತಿಳಿಸಿತ್ತು.
ರಕ್ಷಣಾ ನಿಧಿಗಾಗಿ ಹೆಚ್ಚು ಹಣವನ್ನು ಸಂಗ್ರಹಿಸಲು ರಕ್ಷಣಾ ಸೆಸ್ ವಿಧಿಸುವಿಕೆ, ರಕ್ಷಣಾ ಇಲಾಖೆಯ ಹೆಚ್ಚುವರಿ ಭೂಮಿ ಮತ್ತಿತರ ಸೊತ್ತುಗಳ ನಗದೀಕರಣ, ತೆರಿಗೆ ಮುಕ್ತ ಬಾಂಡ್ಗಳ ಬಿಡುಗಡೆ ಹಾಗೂ ಸಾರ್ವಜನಿಕ ರಂಗದರಕ್ಷಾ ಇಲಾಖೆಯ ಹೂಡಿಕೆ ಹಿಂತೆಗೆತದಿಂದ ದೊರೆಯುವ ಆದಾಯದ ಬಳಕೆ ಇತ್ಯಾದಿ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ರಕ್ಷಣಾ ಇಲಾಖೆ ಚಿಂತಿಸುತ್ತಿದೆ.







