ಎನ್‌ಪಿಆರ್ ಜಾರಿ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ: ವಿಚಾರಣೆ ಮುಂದೂಡಿಕೆ

ಬೆಂಗಳೂರು, ಫೆ.3: ದೇಶದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್) ಜಾರಿಗೆ ತರುವ ಕೇಂದ್ರ ಸರಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿರುವ ಬಗ್ಗೆ ಹಾಗೂ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಯಾಗಿರುವ ಕುರಿತ ಮಾಹಿತಿ ನೀಡಲು ರಾಜ್ಯ ಸರಕಾರ ಹಾಗೂ ಅರ್ಜಿದಾರರಿಗೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿದೆ.
ಈ ಕುರಿತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಕರ್ನಾಟಕ(ಪಿಯುಸಿಎಲ್) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಜಾರಿ ಸಂಬಂಧ ಕೇಂದ್ರ ಸರಕಾರ 2019ರ ಜು.31ರಂದು ಹೊರಡಿಸಿರುವ ಗೆಜೆಟ್ ನೋಟಿಫಿಕೇಷನ್‌ಗೆ ತಡೆ ನೀಡಬೇಕು. ಈ ಗೆಜೆಟ್ ನೋಟಿಫಿಕೇಷನ್ ನಾಗರಿಕ ಕಾಯ್ದೆ-1955ರ ಅನುಚ್ಚೇದ 14, 19 ಮತ್ತು 21 ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ಅರ್ಜಿಯಲ್ಲಿ ಕೇಂದ್ರ, ರಾಜ್ಯ ಸರಕಾರ, ದಿ ರಿಜಿಸ್ಟ್ರರ್ ಜನರಲ್ ಆ್ಯಂಡ್ ಸೆನ್ಸಸ್ ಕಮೀಷನರ್ ಆಫ್ ಇಂಡಿಯಾ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.







