‘ಕೇಜ್ರಿವಾಲ್ ಭಯೋತ್ಪಾದಕ’ ಹೇಳಿಕೆ: ಕೇಂದ್ರ ಸಚಿವರಿಗೆ ಮೃತ ಪೊಲೀಸರ ಕುಟುಂಬಸ್ಥರ ತಿರುಗೇಟು

ಹೊಸದಿಲ್ಲಿ, ಫೆ.3: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಒಬ್ಬ ಭಯೋತ್ಪಾದಕ ಎಂಬ ಬಿಜೆಪಿ ಮುಖಂಡ ಪ್ರಕಾಶ್ ಜಾವಡೇಕರ್ ಹೇಳಿಕೆಗೆ ತಿರುಗೇಟು ನೀಡಿರುವ ಮೃತ ಪೊಲೀಸರ ಕುಟುಂಬದವರು, ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಏಕೈಕ ನಾಯಕನೆಂದರೆ ಅದು ಕೇಜ್ರಿವಾಲ್ ಮಾತ್ರ ಎಂದಿದ್ದಾರೆ.
ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿದ ನಾಲ್ವರು ಪೊಲೀಸರ ಕುಟುಂಬದವರಿಗೆ ಆಪ್ ಸರಕಾರ ತಲಾ 1 ಕೋಟಿ ರೂ.ಗಳ ಪರಿಹಾರ ಧನ ವಿತರಿಸಿದೆ. ಇದರಿಂದ ತಾವು ಎದುರಿಸುತ್ತಿದ್ದ ಸಮಸ್ಯೆಗಳೆಲ್ಲಾ ಪರಿಹಾರವಾಗಿದೆ. ಮಗನನ್ನು ಕಳೆದುಕೊಂಡು ಚಿಂತೆಯಲ್ಲಿದ್ದ ನಮ್ಮ ನೆರವಿಗೆ ದೇವರಂತೆ ಬಂದವರು ಕೇಜ್ರಿವಾಲ್ ಮತ್ತು ಆಪ್ ಸರಕಾರ ಎಂದು ಮೃತ ಪೊಲೀಸ್ ಅಧಿಕಾರಿಗಳ ಕುಟುಂದವರು ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ಮಗನನ್ನು ಅಥವಾ ಗಂಡನನ್ನು ಕಳೆದುಕೊಂಡ ಕುಟುಂಬದವರ ಆತಂಕ, ಸಮಸ್ಯೆಗಳನ್ನು ದೂರವಾಗಿಸಲು ಸಹಾಯಹಸ್ತ ನೀಡುವ ಬಗ್ಗೆ ಇದುವರೆಗೆ ಯಾವ ಸರಕಾರವೂ ಯೋಚಿಸಿರಲಿಲ್ಲ . ಕೇಜ್ರಿವಾಲ್ ಜನತೆಯ ಒಳಿತಿಗಾಗಿ ನಿಸ್ವಾರ್ಥದಿಂದ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಯಾಗಿದ್ದಾರೆ ಎಂದು ವೀಡಿಯೊ ಸಂದೇಶದಲ್ಲಿ ತಿಳಿಸಲಾಗಿದ್ದು ಈ ಹೇಳಿಕೆಯನ್ನು ಮುಖ್ಯಮಂತ್ರಿ ಕೇಜ್ರಿವಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ.





