ಅತ್ಯಾಚಾರದ ಭೀತಿ ಮೂಡಿಸುತ್ತಿರುವ ಬಿಜೆಪಿ ಮುಖಂಡರು : ಪ್ರಧಾನಿಗೆ ಪತ್ರ ಬರೆದ ಮಹಿಳಾ ಸಂಘಟನೆಗಳು

ಹೊಸದಿಲ್ಲಿ, ಫೆ.3: ದಿಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರಚಾರ ರ್ಯಾಲಿ ಸಂದರ್ಭ ಕೆಲವು ಬಿಜೆಪಿ ಮುಖಂಡರು ಮಾಡುತ್ತಿರುವ ದ್ವೇಷ ಭಾಷಣದಿಂದ ಭೀತಿಗೆ ಒಳಗಾಗಿರುವುದಾಗಿ ಸುಮಾರು 175 ಹೋರಾಟಗಾರರು ಮತ್ತು ಮಹಿಳಾ ಸಂಘಟನೆಗಳು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಕೆಲವು ಬಿಜೆಪಿ ಮುಖಂಡರು ಮಹಿಳೆಯರ ವಿರುದ್ಧದ ದ್ವೇಷ ಭಾಷಣದ ಮೂಲಕ ಅತ್ಯಾಚಾರದ ಭಯ ಹುಟ್ಟಿಸುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಪೌರತ್ವ ಕಾಯ್ದೆ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರ ವಿರುದ್ಧ ಹಿಂಸಾಚಾರ ನಡೆಸುವಂತೆ ಹಿಂಬಾಲಕರಿಗೆ ಪ್ರಚೋದನೆ ನೀಡಲಾಗುತ್ತಿದೆ. ಇದರಿಂದ ಹಿಂಸಾಚಾರದ ಪರಿಸ್ಥಿತಿ ನೆಲೆಸಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಆರ್ಥಿಕ ತಜ್ಞೆ ದೇವಕಿ ಜೈನ್, ಹೋರಾಟಗಾರ್ತಿ ಲೈಲಾ ತ್ಯಾಬ್ಜಿ, ಮಾಜಿ ಭಾರತೀಯ ರಾಯಭಾರಿ ಮಧು ಭದೂರಿ, ಲಿಂಗ ಹಕ್ಕು ಹೋರಾಟಗಾರ್ತಿ ಕಮಲಾ ಭಾಸಿನ್, ಆಲ್ ಇಂಡಿಯಾ ಪ್ರೋಗ್ರೆಸಿವ್ ವುಮೆನ್ಸ್ ಅಸೋಸಿಯೇಷನ್, ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ವುಮೆನ್ ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು ಪತ್ರಕ್ಕೆ ಸಹಿ ಹಾಕಿದ್ದಾರೆ.





