ತೀವ್ರ ಅಸಮಾಧಾನಕ್ಕೆ ಕಾರಣವಾದ ‘ಸೋತವರಿಗೆ ಸಚಿವ ಸ್ಥಾನ': ಕಲ್ಯಾಣ ಕರ್ನಾಟಕ ಭಾಗದ ಶಾಸಕರ ಪ್ರತ್ಯೇಕ ಸಭೆ

ಬೆಂಗಳೂರು, ಫೆ. 3: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದಲ್ಲಿ ‘ಸೋತವರಿಗೆ’ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡುವ ವಿಚಾರಕ್ಕೆ ಬಿಜೆಪಿಯ ಕೆಲ ಶಾಸಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ಇದು ಪ್ರತ್ಯೇಕ ಸಭೆಗೂ ದಾರಿ ಮಾಡಿಕೊಟ್ಟಿದೆ.
ಸೋಮವಾರ ಇಲ್ಲಿನ ಶಾಸಕರ ಭವನದಲ್ಲಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಸಿಎಂ ಆಪ್ತ ಮುರುಗೇಶ್ ನಿರಾಣಿ, ಶಾಸಕರಾದ ರಾಜುಗೌಡ, ಪರಣ್ಣ ಮುನವಳ್ಳಿ, ಅರುಣಾ ಪಾಟೀಲ್ ರೇವೂರ ಸೇರಿ 10 ಶಾಸಕರು ಪ್ರತ್ಯೇಕ ಸಭೆ ನಡೆಸಿ, ‘ಸೋತವರಿಗೆ ಸಚಿವ ಸ್ಥಾನ ನೀಡಿದರೆ ಗೆದ್ದವರು ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದ್ದಾರೆ.
ಪ್ರಾತಿನಿಧ್ಯ ಕೊಡಿ: ಕಲ್ಯಾಣ ಕರ್ನಾಟಕ (ಹೈಕ)ಹಿಂದುಳಿದ ಪ್ರದೇಶವಾದ್ದರಿಂದ ಆ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಕಲ್ಯಾಣ ಕರ್ನಾಟಕ ಕೋಟಾದಡಿ ನಮಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮನವಿ ಮಾಡಲಾಗಿದೆ ಎಂದು ಸಚಿವ ಸ್ಥಾನಕಾಂಕ್ಷಿ ರಾಜುಗೌಡ ತಿಳಿಸಿದ್ದಾರೆ.
ಪ್ರತ್ಯೇಕ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕ ಭಾಗದ 10 ಜನ ಶಾಸಕರು ಸಭೆ ಸೇರಿ ಮಾತುಕತೆ ನಡೆಸಿದ್ದೇವೆ. ನಾಳೆಯೂ ಸಭೆ ಸೇರುತ್ತೇವೆ. ಸೋತವರಿಗೆ ಸಂಪುಟದಲ್ಲಿ ಸ್ಥಾನ ನೀಡುವುದಿದ್ದರೆ, ಕಲ್ಯಾಣ ಕರ್ನಾಟಕ ಭಾಗದ ಸೋತ ನಾಯಕರಿಗೆ ಸ್ಥಾನ ಕೊಡಿ’ ಎಂದು ಕೋರಿದರು.
‘ಸಿ.ಪಿ.ಯೋಗೇಶ್ವರ್‌ಗೆ ಸಂಪುಟದಲ್ಲಿ ಸ್ಥಾನ ನೀಡಬಾರದು. ಇದರಿಂದ ಪ್ರಾದೇಶಿಕ ಅಸಮತೋಲನ ಆಗಲಿದೆ. ಇದೀಗ ಸಚಿವ ಸಂಪುಟದಲ್ಲಿ ಬೆಂಗಳೂರು, ಬೆಳಗಾವಿ ಭಾಗದ ಶಾಸಕರು ಹೆಚ್ಚಾಗಿ ಇದ್ದಾರೆ. ಹೀಗಾಗಿ ಅದನ್ನು ಸರಿಪಡಿಸದಿದ್ದರೆ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದರು.
ನಮ್ಮ ಮಾನ ಮುಚ್ಚಿಕೊಳ್ಳಲು ಸಂಪುಟದಲ್ಲಿ ಸ್ಥಾನ ಕೇಳುತ್ತಿದ್ದೇವೆ. 2 ಸ್ಥಾನವಾದರೂ ಆ ಭಾಗಕ್ಕೆ ಕೊಡಿ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಈ ವಿಚಾರದಲ್ಲಿ ನಾವೂ ಯಾರಿಗೂ ಯಾವುದೇ ಕಾರಣಕ್ಕೂ ಬೆದರಿಕೆ ಹಾಕುವುದಿಲ್ಲ. ನಾಳೆಯೂ ಎಲ್ಲ ಶಾಸಕರು ಸೇರಿ ಸಭೆ ನಡೆಸಲಿದ್ದೇವೆ ಎಂದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ ಹೈಕ ಭಾಗಕ್ಕೆ ಹೆಚ್ಚಿನ ಸ್ಥಾನವನ್ನು ನೀಡಿದ್ದರು. ನಾವು ಯಾವುದೇ ಕಾರಣಕ್ಕೂ ಪಕ್ಷ ವಿರೋಧಿಗಳಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂಬುದಷ್ಟೇ ನಮ್ಮ ಆಗ್ರಹ ಎಂದು ರಾಜುಗೌಡ ಪ್ರತಿಪಾದಿಸಿದರು.
ಸೋತವರು ಮಂತ್ರಿ, ಗೆದ್ದವರು ಶಾಸಕ
‘ಸಂಪುಟದಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡುವುದಾದರೆ ನಾವು ಏಕೆ ಶಾಸಕರಾಗಿ ಆಯ್ಕೆಯಾಗಬೇಕಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೋತ ನೂರಕ್ಕೂ ಹೆಚ್ಚು ಶಾಸಕರಿದ್ದು, ಅವರಿಗೂ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಿ. ‘ಸೋತವರು ಮಂತ್ರಿ ಆಗುತ್ತಾರೆ, ಗೆದ್ದವರು ಶಾಸಕರಾಗುತ್ತಾರೆ’ ಎಂದು ಜನ ವ್ಯಂಗ್ಯವಾಡುವ ಕಾಲ ಬರಬಹುದು.
-ರಾಜುಗೌಡ, ಬಿಜೆಪಿ ಶಾಸಕ







