9 ಇಲಾಖೆಗಳ ಜೊತೆ ಬಜೆಟ್ ಪೂರ್ವಭಾವಿ ಸಭೆ ನಡೆಸಿದ ಮುಖ್ಯಮಂತ್ರಿ

ಬೆಂಗಳೂರು, ಫೆ.3: 2020-21ನೇ ಸಾಲಿನ ರಾಜ್ಯ ಬಜೆಟ್ ಸಿದ್ಧತೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉನ್ನತ ಶಿಕ್ಷಣ, ಸಾರಿಗೆ, ವೈದ್ಯಕೀಯ ಶಿಕ್ಷಣ, ಕೃಷಿ ಸೇರಿದಂತೆ 9 ಇಲಾಖೆಗಳ ಜೊತೆ ಸೋಮವಾರ ಪೂರ್ವಭಾವಿ ಸಭೆ ನಡೆಸಿದರು.
ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಕೀಯ ಶಿಕ್ಷಣ, ಕೃಷಿ, ಸಾರಿಗೆ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಚರ್ಚೆ ನಡೆಸಿದರು. ಅಲ್ಲದೇ, ಇಲಾಖಾವಾರು ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿ ಸ್ವೀಕರಿಸಿದರು.
ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಹೊರ ತಂದಿರುವ ನರೇಗಾ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿದರು.
ಬೆಳಗ್ಗೆಯಿಂದ 9 ಇಲಾಖೆಗಳ ಬಜೆಟ್ ಸಿದ್ಧತೆ ಕುರಿತು ಸಭೆ ನಡೆಸಲಾಗಿದೆ. ಇದುವರೆಗೆ ಆಗಿರುವ ಪ್ರಗತಿ ಪರಿಶೀಲನೆ ನಡೆಸಲಾಗಿದ್ದು, ಮುಂದೆ ಆಗಬೇಕಿರುವ ಯೋಜನೆ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಎಲ್ಲವನ್ನೂ ಒಂದು ರೂಪಕ್ಕೆ ತಂದಿದ್ದೇನೆ. ಮೂರು ನಾಲ್ಕು ದಿನಗಳಲ್ಲಿ ಉಳಿದ ಇಲಾಖೆಗಳ ಸಭೆ ಕರೆದು ಚರ್ಚೆ ನಡೆಸುತ್ತೇನೆ. ಈ ಬಾರಿ ಜನಪರ ಹಾಗೂ ರೈತರ ಪರವಾಗಿರುವ ಬಜೆಟ್ ಮಂಡನೆ ಮಾಡಲಾಗುವುದು ಎಂದು ಅವರು ಹೇಳಿದರು.
ನೆರೆ ಹಾವಳಿ, ಬರ ಪರಿಸ್ಥಿತಿ, ರೈತರ ಸಾಲಮನ್ನಾದಿಂದಾಗಿ ಬಜೆಟ್ ಮಂಡನೆಗೆ ಹಣಕಾಸು ತೊಂದರೆ ಏನು ಎದುರಾಗುವುದಿಲ್ಲವೇ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡದೇ ಮುಖ್ಯಮಂತ್ರಿ ತೆರಳಿದರು.







