ನನ್ನ ಪ್ರಶ್ನೆಗೆ ಹೆದರದೆ ಉತ್ತರಿಸಿ: ನಿರ್ಮಲಾ ಸೀತಾರಾಮನ್‌ಗೆ ರಾಹುಲ್ ಸವಾಲು

ಹೊಸದಿಲ್ಲಿ, ಫೆ.3: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ದಯವಿಟ್ಟು ನನ್ನ ಪ್ರಶ್ನೆಗಳನ್ನು ನೋಡಿ ಗಾಬರಿಯಾಗಬೇಡಿ. ದೇಶದ ಯುವಜನತೆಯ ಪರವಾಗಿ ಈ ಪ್ರಶ್ನೆ ಕೇಳುತ್ತಿದ್ದೇನೆ. ಇದಕ್ಕೆ ಉತ್ತರಿಸಬೇಕಾದ್ದು ನಿಮ್ಮ ಜವಾಬ್ದಾರಿಯಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರನ್ನುದ್ದೇಶಿಸಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಯುವಜನತೆಗೆ ಉದ್ಯೋಗದ ಅಗತ್ಯವಿದೆ. ಆದರೆ ಉದ್ಯೋಗ ದೊರಕಿಸುವಲ್ಲಿ ಸರಕಾರ ದಯನೀಯವಾಗಿ ವಿಫಲವಾಗಿದೆ ಎಂದು ‘ಜವಾಬ್ ದೊ ಮಂತ್ರೀಜಿ’ ಎಂಬ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.
ಇದರ ಜೊತೆಗೆ ಪತ್ರಿಕೆಯಲ್ಲಿ ಬಂದ ಸುದ್ದಿಯ ತುಣುಕೊಂದನ್ನೂ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ನಿರುದ್ಯೋಗದ ಬಗ್ಗೆ ತಾನೇನಾದರೂ ಅಂಕಿಅಂಶ ಪ್ರಸ್ತುತಪಡಿಸಿದರೆ ಇದರ ಬಗ್ಗೆ ಕೆಲವು ತಿಂಗಳ ಬಳಿಕ ರಾಹುಲ್ ಪ್ರಶ್ನೆ ಎತ್ತುತ್ತಾರೆ . ಆದ್ದರಿಂದ ಕೆಲ ತಿಂಗಳು ಕಾದ ಬಳಿಕ ಯಾವುದೇ ಅಂಕಿಅಂಶ ನೀಡುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಹೇಳಿರುವುದಾಗಿ ಪತ್ರಿಕೆಯಲ್ಲಿ ವರದಿಯಾಗಿತ್ತು.
ಕೇಂದ್ರ ಸರಕಾರ ಯುವಜನತೆಗೆ ಉದ್ಯೋಗ ದೊರಕಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.







