''ಚಿತ್ರ ನಿರ್ಮಾಪಕರು-ಚಿತ್ರಮಂದಿರ ಮಾಲಕರ ಹಿತ ಕಾಪಾಡಲು ರಾಜ್ಯದಲ್ಲಿ ಶೇಕಡವಾರು ಪದ್ಧತಿ ಜಾರಿಗೆ''
ಬೆಂಗಳೂರು, ಫೆ.3: ಚಲನಚಿತ್ರ ನಿರ್ಮಾಪಕರ ಬೇಡಿಕೆ ಹಿನ್ನೆಲೆಯಲ್ಲಿ ಎಲ್ಲ ನಿರ್ಮಾಪಕರ ಹಿತ ಕಾಪಾಡುವ ದೃಷ್ಟಿಯಿಂದ ಎ.2ರಿಂದ ರಾಜ್ಯದಲ್ಲಿ ಚಿತ್ರಮಂದಿರ ಮಾಲಕರು ಹಾಗೂ ನಿರ್ಮಾಪಕರ ನಡುವೆ ಶೇಕಡವಾರು ಆದಾಯ ಹಂಚಿಕೆ ವ್ಯವಸ್ಥೆ ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ. ರಾಮಕೃಷ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಕನ್ನಡ ಚಿತ್ರೋದ್ಯಮದಲ್ಲಿ ವರ್ಷಕ್ಕೆ 250ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ದೊಡ್ಡ ನಿರ್ಮಾಪಕರು, ಸಣ್ಣ ನಿರ್ಮಾಪಕರು ಎಂದು ತಾರತಮ್ಯ ಇಲ್ಲದೇ ಎಲ್ಲರ ಹಿತಾಸಕ್ತಿ ಕಾಪಾಡಲು ರಾಜ್ಯದಲ್ಲೂ ಕೇರಳ ಮಾದರಿಯ ಶೇಕಡಾವಾರು ಪದ್ಧತಿ ಜಾರಿಗೆ ತರಬೇಕು ಎಂದು ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಚಿತ್ರಮಂದಿರ ಮಾಲಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಈ ವ್ಯವಸ್ಥೆಯನ್ನು ಹೇಗೆ ಜಾರಿಗೆ ತರಬೇಕು. ಚಿತ್ರಕ್ಕೆ ದುಡ್ಡು ಹಾಕುವ ನಿರ್ಮಾಪಕನಿಗೂ ಹಾಗೂ ಚಿತ್ರಮಂದಿರ ಮಾಲಕರಿಗೂ ಹೇಗೆ ಅನುಕೂಲವಾಗುವಂತೆ ಈ ವ್ಯವಸ್ಥೆ ಅಳವಡಿಸಬೇಕು ಎಂಬುದನ್ನು ತೀರ್ಮಾನಿಸಲು ಸದ್ಯದಲ್ಲೇ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.
ಸಂಘದ ಖಜಾಂಚಿ ಕೆ.ಮಂಜು ಮಾತನಾಡಿ, ಕೇರಳದಲ್ಲಿ ಅನೇಕ ವರ್ಷಗಳಿಂದ ಈ ವ್ಯವಸ್ಥೆ ಜಾರಿಯಲ್ಲಿದೆ. ಕೆಲವು ಕಡೆಗಳಲ್ಲಿ 65-35, 55-45ರ ಅನುಪಾತದಲ್ಲಿ ಶೇಕಡವಾರು ಹಂಚಿಕೆ ಮಾಡಿಕೊಳ್ಳಲಾಗುತ್ತಿದೆ. ಮೊದಲ ವಾರ, ಎರಡನೇ ವಾರ ಗಳಿಕೆ ಆಧಾರದ ಮೇಲೆ ಶೇಕಡವಾರು ಪ್ರಮಾಣ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.







