ಒಳಚರಂಡಿ ಸ್ವಚ್ಚಗೊಳಿಸಲು ಇಳಿದ ಯುವಕ ಮೃತ್ಯು

ಹೊಸದಿಲ್ಲಿ, ಫೆ. 3: ಪೂರ್ವ ದಿಲ್ಲಿಯಲ್ಲಿ ಒಳಚರಂಡಿ ಸ್ವಚ್ಛಗೊಳಿಸಲು ಇಳಿದ 22 ವರ್ಷದ ಯುವಕ ವಿಷಾನಿಲ ಸೇವಿಸಿ ಮೃತಪಟ್ಟಿದ್ದಾರೆ. ಇನ್ನೊಬ್ಬರು ಅಸ್ವಸ್ತರಾಗಿದ್ದಾರೆ.
ಕಾರ್ಮಿಕರು ಯಾವುದೇ ಸಂರಕ್ಷಣಾ ಮಾಸ್ಕ್ ಧರಿಸಿರಲಿಲ್ಲ. ಕಾರ್ಮಿಕರ ಗುತ್ತಿಗೆದಾರ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಬಿಡಿ ಮೈದಾನದ ಪಾರ್ಕಿಂಗ್ ಪ್ರದೇಶದಲ್ಲಿ ಇರುವ ಒಳಚರಂಡಿ ಮಾರ್ಗವನ್ನು ಈ ಕಾರ್ಮಿಕರು ಶನಿವಾರದಿಂದ ಸ್ವಚ್ಛಗೊಳಿಸುತ್ತಿದ್ದರು. ಈ ಸಂದರ್ಭ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ಯುವಕನನ್ನು ರವಿ ಎಂದು ಹಾಗೂ ಅಸ್ವಸ್ತಗೊಂಡ ವ್ಯಕ್ತಿಯನ್ನು ಸಂಜಯ್ (35) ಎಂದು ಗುರುತಿಸಲಾಗಿದೆ.
ಕಟ್ಟಿಕೊಂಡಿದ್ದ ಒಳಚರಂಡಿಯನ್ನು ಸ್ವಚ್ಛಗೊಳಿಸಲು ಗುತ್ತಿಗೆದಾರ ಐವರು ಕಾರ್ಮಿಕರಿಗೆ ತಿಳಿಸಿದ್ದ. ಒಳಚರಂಡಿ 15 ಅಡಿ ಆಳವಿತ್ತು. ಅಲ್ಲದೆ, ಯಾವುದೇ ಸುರಕ್ಷಾ ಕವಚ ಇರಲಿಲ್ಲ. ಈ ಕಾರಣಕ್ಕೆ ಕಾರ್ಮಿಕರು ಇಳಿಯಲು ನಿರಾಕರಿಸಿದ್ದರು. ಆದರೆ, ಗುತ್ತಿಗೆದಾರ ಬಲವಂತಪಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರವಿ ಹಗ್ಗ ಬಳಸಿ ಮೊದಲು ಒಳಚರಂಡಿಗೆ ಇಳಿದ. ಆದರೆ, ಮೇಲೆ ಬರಲಿಲ್ಲ. ಅನಂತರ ಇಳಿದ ಸಂಜಯ್ ಕೂಡ ಮೇಲೆ ಬರಲಿಲ್ಲ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಅವರಿಬ್ಬರನ್ನು ಮೇಲೆತ್ತಿ ಲೋಕ ನಾಯಕ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ರವಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸಂಜಯ್ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







