ವೈಫಲ್ಯಗಳನ್ನು ಮುಚ್ಚಿ ಹಾಕಲು ಸಿಎಎ, ಎನ್‌ಆರ್‌ಸಿ ಬಳಕೆ: ವುಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ
ಮಡಿಕೇರಿಯಲ್ಲಿ ಸಿಎಎ ವಿರುದ್ಧ ಮಹಿಳಾ ಸಮಾವೇಶ

ಮಡಿಕೇರಿ ಫೆ.3 : ದೇಶದ ಹಲವು ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡುವಷ್ಟು ಹೀನಾಯ ಸ್ಥಿತಿಗೆ ತಲುಪಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ವೈಫಲ್ಯಗಳನ್ನು ಮರೆ ಮಾಚಲು ಮತ್ತು ಜನರ ಹಾದಿ ತಪ್ಪಿಸಲು ಇಂದು ದೇಶದಲ್ಲಿ ಸಿಎಎ ಹಾಗೂ ಎನ್‍ಆರ್‍ಸಿ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ವುಮೆನ್ ಇಂಡಿಯಾ ಮೂವ್ಮೆಂಟ್ ನ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್ ಆರೋಪಿಸಿದ್ದಾರೆ.
ವುಮೆನ್ ಇಂಡಿಯಾ ಮೂವ್ಮೆಂಟ್ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ನಡೆದ ಸಿಎಎ, ಎನ್‍ಆರ್‍ಸಿ ಹಾಗೂ ಎನ್‍ಪಿಆರ್ ವಿರುದ್ಧದ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಾತಿ, ಧರ್ಮದ ಹೆಸರಿನಲ್ಲಿ ಮತ್ತು ವಿಭಜನೆಯ ಆಧಾರದಲ್ಲಿ ರಾಜಕೀಯ ಲಾಭ ಗಳಿಸಲು ಕೇಂದ್ರ ಸರ್ಕಾರ ಹವಣಿಸುತ್ತಿದೆ ಎಂದು ಟೀಕಿಸಿದರು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾವುದೇ ಕಾಯ್ದೆಗಳು ಮಾನವೀಯತೆಯ ಆಧಾರದಲ್ಲಿ ರಚನೆಯಾಗಬೇಕೆ ಹೊರತು ಧರ್ಮದ ಆಧಾರದಲ್ಲಿ ರಚನೆಯಾಗಬಾರದು. ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಸಂವಿಧಾನದಲ್ಲಿ ಪ್ರತಿಯೊಬ್ಬ ಭಾರತೀಯನಿಗೆ ಸಮಾನ ಹಕ್ಕು ನೀಡಲಾಗಿದೆ. ಆದರೆ ಇಂದಿನ ಕೇಂದ್ರ ಸರ್ಕಾರ ಸಿಎಎ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಸಂವಿಧಾನವನ್ನು ತಿರುಚುವ ಪ್ರಯತ್ನ ಮಾಡುತ್ತಿದೆ. ಧರ್ಮ ಧರ್ಮಗಳ ನಡುವೆ ಒಡಕನ್ನು ಮೂಡಿಸುವ ಸಲುವಾಗಿ ದೇಶಕ್ಕೆ ಮಾರಾಕವಾಗಿರುವ ಕಾಯ್ದೆಯನ್ನು ಜಾರಿಗೆ ತಂದು ಜನರ ಮತದಾನದ ಹಕ್ಕು, ಕಾನೂನು ಹೋರಾಟದ ಹಕ್ಕು, ಒಡನಾಟದ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕುಗಳನ್ನು ಕಸಿದುಕೊಳ್ಳುವ ಷಡ್ಯಂತ್ರ ನಡೆಯುತ್ತಿದೆ ಎಂದು ಶಾಹಿದಾ ತಸ್ನೀಮ್ ಆರೋಪಿಸಿದರು.
ನ್ಯಾಷನಲ್ ವುಮನ್ ಫ್ರಂಟ್ ನ ಜಿಲ್ಲಾಧ್ಯಕ್ಷೆ ಝಾಕಿಯಾ ಹುಲೈರ ಮಾತನಾಡಿ, ಸರ್ವಧರ್ಮ ಸಮಾನತೆಯ ಸಂದೇಶವನ್ನು ನೀಡಿದ ಸಂವಿಧಾನದ ಆಶಯಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತಿರುಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಟೀಕಿಸಿದರು.
ಪೌರತ್ವ ಕಾಯ್ದೆಯ ದುಷ್ಪರಿಣಾಮ ಕೇವಲ ಒಂದು ಸಮುದಾಯ ಅಥವಾ ಪಕ್ಷಕ್ಕೆ ಸೀಮಿತವಾಗಿಲ್ಲ, ಅದು ಎಲ್ಲರಿಗೂ ಅನ್ವಯವಾಗುತ್ತದೆ ಎಂದ ಅವರು ಧರ್ಮದ ಹೆಸರಿನಲ್ಲಿ ಭಾರತೀಯರನ್ನು ಬೇರ್ಪಡಿಸುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು. ಭಾರತದಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬ ಪ್ರಜೆಗೂ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಸುಂದರವಾದ ಮನೆಯಂತಿದ್ದು, ಇದನ್ನು ಒಡೆಯಲು ಬಿಡುವುದಿಲ್ಲ ಮತ್ತು ಇಲ್ಲಿನ ಮೂಲ ನಿವಾಸಿಗಳು ಎಲ್ಲಿಗೂ ಹೋಗಲು ಸಾಧ್ಯವಿಲ್ಲ ಎಂದರು.
ದೇಶದ ಪ್ರಧಾನಿ ಭಾರತವನ್ನು ಡಿಜಿಟಲ್ ಇಂಡಿಯಾ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೆ ನಗರ ಪ್ರದೇಶಗಳಲ್ಲೇ ಸರ್ವರ್ ಸಮಸ್ಯೆಯಿಂದ ಜನ ಪರದಾಡುವ ಪರಿಸ್ಥಿತಿ ಇದೆ. ಕೇಂದ್ರ ಸರ್ಕಾರದ ತಪ್ಪು ಲೆಕ್ಕಾಚಾರಗಳಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಸಮಸ್ಯೆಗಳನ್ನು ಬಗೆಹರಿಸಿ ರಾಷ್ಟ್ರವನ್ನು ಉದ್ಧಾರ ಮಾಡುವ ಪ್ರಯತ್ನಗಳಿಗೆ ಮುಂದಾಗದೆ ವೈಫಲ್ಯಗಳನ್ನು ಮರೆಮಾಚುವ ಏಕೈಕ ಉದ್ದೇಶದಿಂದ ಸಂವಿಧಾನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಆರೋಪಿಸಿದರು.
ಭಾರತದಲ್ಲೇ ಹುಟ್ಟಿ ಬೆಳದು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಧಾರದಲ್ಲಿ ಜೀವನ ಸಾಗಿಸುತ್ತಿರುವ ನಾವು ಯಾವುದೇ ಕಾರಣಕ್ಕೂ ಪೌರತ್ವ ಕಾಯ್ದೆಗಾಗಿ ನಮ್ಮ ದಾಖಲೆಗಳನ್ನು ನೀಡುವುದಿಲ್ಲವೆಂದು ಝಾಕಿಯಾ ಘೋಷಿಸಿದರು.
ದೇಶದೊಳಗಿರುವವರಿಗೆ ಮೊದಲು ನ್ಯಾಯ ಕೊಡಿ
ಹೊದ್ದೂರು ಗ್ರಾ.ಪಂ ಉಪಾಧ್ಯಕ್ಷೆ ಹಾಗೂ ಬಹುಜನ ಕಾರ್ಮಿಕ ಸಂಘದ ಮುಖಂಡರಾದ ಕುಸುಮ ಮಾತನಾಡಿ, ಸಿಎಎ ಕಾಯ್ದೆ ಬಡವರ್ಗಕ್ಕೆ ಮತ್ತು ದುರ್ಬಲರಿಗೆ ಹೆಚ್ಚಿನ ತೊಂದರೆಯನ್ನು ನೀಡಲಿದೆ. ಅಲ್ಲದೆ ಈ ಕಾಯ್ದೆ ಎಲ್ಲಾ ಜನಾಂಗದವರಿಗೆ ಅನ್ವಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಭಾರತ ದೇಶದ ಮೂಲ ನಿವಾಸಿಗಳಾದ ಆದಿವಾಸಿಗಳು ಸೌಲಭ್ಯಗಳಿಂದ ವಂಚಿತರಾಗಿ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದುಸ್ಥಿತಿಯ ಬದುಕಿನ ಬಗ್ಗೆ ಕೇಂದ್ರ ಸರ್ಕಾರ ಯಾಕೆ ಗಮನ ಹರಿಸುತ್ತಿಲ್ಲ, ದೇಶದೊಳಗೆಯೇ ನೋವಿನ ಜೀವನ ನಡೆಸುತ್ತಿರುವವರಿಗೆ ಸಾಂತ್ವನದ ಮಾತಗಳನ್ನು ಯಾಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.
ಇಂದಿಗೂ ಕಾಡು ಪ್ರದೇಶದಲ್ಲೇ ವಾಸ ಮಾಡುತ್ತಿರುವ ಆದಿವಾಸಿಗಳು ಅಗತ್ಯ ದಾಖಲೆಗಳನ್ನು ಹೊಂದಿರಲು ಸಾಧ್ಯವೇ ಎಂದು ಕೇಳಿದ ಕುಸುಮ, ಶ್ರೀಮಂತ ಕುಟುಂಬಗಳಿಗೆ ಅಡುಗೆ ಅನಿಲ ವಿತರಿಸುವ ಕೇಂದ್ರ ಸರ್ಕಾರಕ್ಕೆ ಬಡ ವರ್ಗದ ಮಂದಿಗೆ ಮನೆಗಳನ್ನು ನಿರ್ಮಿಸಿಕೊಡಲು ಯಾಕೆ ಸಾಧ್ಯವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್ ಮುಕ್ತ ಭಾರತ ಎಂದು ಸರ್ಕಾರ ಪ್ರಚಾರದಲ್ಲಿ ತೊಡಗಿದೆ, ಆದರೆ ಕೊಡಗಿನ ಬಹುಪಾಲು ಮೂಲ ನಿವಾಸಿ ಆದಿವಾಸಿಗಳು ಇಂದಿಗೂ ಪ್ಲಾಸ್ಟಿಕ್ ಗುಡಿಸಲುಗಳನ್ನೆ ಹೊಂದಿದ್ದಾರೆ. ಖುದ್ದು ಸರ್ಕಾರವೇ ಪ್ರತಿವರ್ಷ ಪ್ಲಾಸ್ಟಿಕ್ ಗಳನ್ನು ಸರಬರಾಜು ಮಾಡಿ ಗುಡಿಸಲುಗಳಲ್ಲಿ ಇರುವಂತೆ ಪ್ರೇರೇಪಿಸುತ್ತಿದೆ. ವಿದೇಶಗಳಲ್ಲೇ ಕಾಣಿಕೊಳ್ಳುವ ನಮ್ಮ ಪ್ರಧಾನಮಂತ್ರಿಗಳು ಆದಿವಾಸಿಗಳು ಹಾಗೂ ಗ್ರಾಮೀಣ ಭಾಗದ ಜನರ ಕಷ್ಟಗಳನ್ನು ಅರಿತುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲವೆಂದು ಕುಸುಮ ಆರೋಪಿಸಿದರು.
ಮಹಿಳಾ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿ, ಪ್ರತಿಯೊಬ್ಬ ಮಹಿಳೆಯೂ ತಮ್ಮ ಜವಾಬ್ದಾರಿಯನ್ನು ಅರಿತು ಸಾಮಾಜಿಕ ಜಾಗೃತಿಯಲ್ಲಿ ತೊಡಗಿಸಿಕೊಳ್ಳಬೇಕು, ಹಾಗಾದಾಗ ಮಾತ್ರ ಹಾದಿ ತಪ್ಪುವ ಸರ್ಕಾರಗಳನ್ನು ಎಚ್ಚರಗೊಳಿಸಲು ಸಾಧ್ಯವೆಂದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಿಗೆ ಪ್ರಯಾಣ ಬೆಳೆಸುವ ಮೊದಲು ದೇಶದೊಳಗಿನ ಜನರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯವನ್ನು ಮೊದಲು ಮಾಡಬೇಕಾಗಿದೆ. ಆದರೆ ಸಮಸ್ಯೆಗಳೇ ಇಲ್ಲದಂತೆ ವರ್ತಿಸುತ್ತಿರುವ ಕೇಂದ್ರ ಸರ್ಕಾರ ಪ್ರಯೋಜನಕ್ಕೆ ಬಾರದ ಕಾಯ್ದೆಗಳನ್ನು ಜಾರಿಗೆ ತಂದು ಜನರಿಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿದರು.
ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ಮನೆಗಳು ದೊರಕದೆ ಅತಂತ್ರ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಕೊಡಗಿನ ಜನಪ್ರತಿನಿಧಿಗಳು ಮಾತ್ರ ಏನೂ ನಡೆದೇ ಇಲ್ಲ ಎನ್ನುವ ರೀತಿಯಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆದು ಅಗತ್ಯ ಪರಿಹಾರೋಪಾಯಗಳನ್ನು ಅನುಷ್ಠಾನಗೊಳಿಸುವ ಕಾರ್ಯವನ್ನು ಮೊದಲು ಮಾಡಲಿ ಎಂದು ಸುರಯ್ಯ ಅಬ್ರಾರ್ ಒತ್ತಾಯಿಸಿದರು.
ವುಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಕಾರ್ಯದರ್ಶಿ ನಾಗರತ್ನ, ಜಿಲ್ಲಾಧ್ಯಕ್ಷೆ ನಫೀಸ ಅಡ್ಕಾರ್, ಪ್ರಧಾನ ಕಾರ್ಯದರ್ಶಿ ನಫೀಝಾ ಅಕ್ಬರ್, ಭೀಮ್ ಆರ್ಮಿ ಜಿಲ್ಲಾಧ್ಯಕ್ಷೆ ಕಾವೇರಿ, ಹೋರಾಟಗಾರ್ತಿ ನಜ್ಮಾ ನಜೀರ್, ಉಮೈರ, ಎನ್.ಡಬ್ಲ್ಯೂ.ಎಫ್ ಜಿಲ್ಲಾ ಕಾರ್ಯದರ್ಶಿ ತಾಹಿರ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.







