ನ್ಯೂಝಿಲ್ಯಾಂಡ್ ವಿರುದ್ಧ 5ನೇ ಟ್ವೆಂಟಿ -20: ನಿಧಾನಗತಿಯ ಬೌಲಿಂಗ್‌ಗೆ ಭಾರತಕ್ಕೆ ಮತ್ತೊಮ್ಮೆ ದಂಡ
ದುಬೈ, ಫೆ.3: ವೌಂಟ್ ಮೊಂಗುನುಯಿನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ಐಸಿಸಿ ಪಂದ್ಯ ಶುಲ್ಕದಲ್ಲಿ ಶೇ.20ರಷ್ಟು ದಂಡ ವಿಧಿಸಿದೆ.
ಭಾರತ ನಿಗದಿತ ಸಮಯದಲ್ಲಿ ಒಂದು ಓವರ್ ಕಡಿಮೆ ಬೌಲಿಂಗ್ ಮಾಡಿರುವುದನ್ನು ಪರಿಗಣಿಸಿದ ಐಸಿಸಿ ಎಲೈಟ್ ಪ್ಯಾನಲ್‌ನ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಪಂದ್ಯ ಶುಲ್ಕದಲ್ಲಿ ಶೇ.20ರಷ್ಟು ದಂಡ ವಿಧಿಸಿದ್ದಾರೆ.
‘‘ಆಟಗಾರರು ಹಾಗೂ ಆಟಗಾರರ ಸಹಾಯಕ ಸಿಬ್ಬಂದಿಗೆ ಕಡಿಮೆ ಓವರ್ ರೇಟ್ ಪ್ರಮಾದಕ್ಕೆ ಸಂಬಂಧಿಸಿ ಐಸಿಸಿ ನೀತಿ ಸಂಹಿತೆ ಆರ್ಟಿಕಲ್ 2.22ರ ಪ್ರಕಾರ ನಿಗದಿತ ಸಮಯದಲ್ಲಿ ಬೌಲಿಂಗ್ ಪೂರ್ತಿಗೊಳಿಸದ ಆಟಗಾರರಿಗೆ ಪ್ರತಿ ಓವರ್‌ಗೆ ಶೇ.20ರಷ್ಟು ದಂಡ ತೆರಬೇಕಾಗುತ್ತದೆ’’ ಎಂದು ಐಸಿಸಿ ತಿಳಿಸಿದೆ. ಭಾರತದ ಹಂಗಾಮಿ ನಾಯಕ ರೋಹಿತ್ ಶರ್ಮಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ದಂಡವನ್ನು ಸ್ವೀಕರಿಸಿದ್ದಾರೆ. ಹೀಗಾಗಿ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.
ಭಾರತ ಟ್ವೆಂಟಿ-20 ಸರಣಿಯಲ್ಲಿ ಸತತ ಎರಡನೇ ಬಾರಿ ನಿಧಾನಗತಿಯ ಬೌಲಿಂಗ್‌ಗೆ ದಂಡ ತೆರುತ್ತಿದೆ. ಶನಿವಾರ ಭಾರತೀಯ ತಂಡ 4ನೇ ಟ್ವೆಂಟಿ-20 ಪಂದ್ಯದಲ್ಲಿ ಎರಡು ಓವರ್ ಕಡಿಮೆ ಬೌಲಿಂಗ್ ಮಾಡಿದ ತಪ್ಪಿಗೆ ಪಂದ್ಯಶುಲ್ಕದಲ್ಲಿ ಶೇ.40ರಷ್ಟು ದಂಡ ಪಾವತಿಸಿತ್ತು.





