ಅಂಡರ್ -19 ವಿಶ್ವಕಪ್ ಸೆಮಿಫೈನಲ್: ಭಾರತಕ್ಕೆ ಪಾಕಿಸ್ತಾನ ಎದುರಾಳಿ

ಜೋಹಾನ್ಸ್‌ಬರ್ಗ್,ಫೆ.3: ಅಂಡರ್-19 ವಿಶ್ವಕಪ್‌ನಲ್ಲಿ ಸತತ ನಾಲ್ಕನೇ ಬಾರಿ ಫೈನಲ್‌ಗೇರುವ ಪ್ರಯತ್ನದಲ್ಲಿರುವ ಹಾಲಿ ಚಾಂಪಿಯನ್ ಭಾರತ ಮಂಗಳವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
ಉಭಯ ತಂಡಗಳು ಅಜೇಯವಾಗಿ ಸೆಮಿಫೈನಲ್ ತಲುಪಿವೆ. ಭಾರತ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಮಣಿಸಿ ಸೆಮಿಫೈನಲ್ ತಲುಪಿದರೆ , ಪಾಕಿಸ್ತಾನವು ಅಫ್ಘಾನಿಸ್ತಾವನ್ನು ಸುಲಭವಾಗಿ ಮಣಿಸಿ ಸೆಮಿಫೈನಲ್‌ಗೆ ಅವಕಾಶ ದೃಢಪಡಿಸಿತ್ತು. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಸದಾ ಒತ್ತಡದಿಂದ ಕೂಡಿರುತ್ತದೆ. ಆದರೆ ನಾವು ಸಹಜ ಆಟವನ್ನು ಆಡುವುದಾಗಿ ಮತ್ತು ಉತ್ತಮ ಪ್ರದರ್ಶನ ನೀಡುವುದಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ರಾಹಿಲ್ ನಝೀರ್ ಹೇಳಿದ್ದಾರೆ.
ಭಾರತ ತಂಡ ಅಂತರ್‌ರಾಷ್ಟ್ರೀಯ ಮಟ್ಟದ ಪ್ರಮುಖ ಟೂರ್ನಮೆಂಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತದೆ, ಕಳೆದ ಸೆಪ್ಟಂಬರ್‌ನಲ್ಲಿ ನಡೆದ ಏಶ್ಯಕಪ್‌ನಲ್ಲಿ ಭಾರತ ಚಾಂಪಿಯನ್ ಆಗಿತ್ತು. ಫೈನಲ್‌ನಲ್ಲಿ ಬಾಂಗ್ಲಾ ತಂಡವನ್ನು ಮಣಿಸಿತ್ತು.
ಪ್ರಿಯಮ್ ಗರ್ಗ್ ನಾಯಕತ್ವದ ಭಾರತವು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಚೆನ್ನಾಗಿ ಆಡುವುದನ್ನು ನಿರೀಕ್ಷಿಸಲಾಗಿದೆ.
ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ತಂಡದ ಬೆನ್ನೆಲುಬು ಆಗಿದ್ದಾರೆ. ಅವರು ಆಸ್ಟ್ರೇಲಿಯ ವಿರುದ್ಧ ಪಂದ್ಯ ಸೇರಿದಂತೆ 4 ಅರ್ಧಶತಕಗಳನ್ನು ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ ಕಾರ್ತಿಕ್ ತ್ಯಾಗಿ ಯಶಸ್ವಿಯಾಗಿದ್ದಾರೆ.
ಪಾಕಿಸ್ತಾನದ ವೇಗದ ಬೌಲರ್ ಅಬ್ಬಾಸ್ ಅಫ್ರಿದಿ , ಮುಹಮ್ಮದ್ ಆಮಿರ್ ಖಾನ್ ಮತ್ತು ತಾಹಿರ್ ಹುಸೈನ್ ಅವರು ಭಾರತದ ಬ್ಯಾಟಿಂಗ್‌ಗೆ ಸವಾಲು ಒಡ್ಡುವುದನ್ನು ನಿರೀಕ್ಷಿಸಲಾಗಿದೆ. ಆರಂಭಿಕ ದಾಂಡಿಗ ಹುರೈರಾ ಕೇವಲ ಒಂದು ಪಂದ್ಯವನ್ನಾಡಿದ್ದಾರೆ. ಚೊಚ್ಚಲ ಪಂದ್ಯದಲ್ಲಿ 64 ರನ್ ಗಳಿಸಿ ಅಫ್ಘಾನಿಸ್ತಾನ ವಿರುದ್ಧ ಗೆಲುವಿಗೆ ನೆರವಾಗಿದ್ದರು.







