ಕೃಷ್ಣಾಪುರ: ಬಹುಜನಕ್ರಾಂತಿ ಮೋರ್ಚಾ ವತಿಯಿಂದ ‘ಪರಿವರ್ತನಾ ಯಾತ್ರೆ’
ಸುರತ್ಕಲ್, ಫೆ.3: ಇವಿಎಂ (ಇಲೆಕ್ಟ್ರಾನಿಕ್ ಮತಯಂತ್ರ) ನಿಂದಾಗಿಯೇ ಈ ಸಿಎಎ, ಎನ್‌ಆರ್‌ಸಿ ಕಾನೂನು ಜಾರಿಗೆ ಬರಲು ಸಾಧ್ಯವಾಯಿತು. ಹಾಗಾಗಿ ಸಿಎಎ, ಎನ್‌ಆರ್‌ಸಿಗಳು ಇವಿಎಂನ ಮಕ್ಕಳಿದ್ದ ಹಾಗೆ ಎಂದು ಬಹುಜನಕ್ರಾಂತಿ ಮೋರ್ಚಾದ ರಾಷ್ಟ್ರೀಯ ಸಂಯೋಜಕ ವಾಮನ್ ಮೆಶ್ರಾಮ್ ಹೇಳಿದ್ದಾರೆ.
ಇವಿಎಂ ರಹಸ್ಯ ಹಗರಣ ಮತ್ತು ಸಿಎಎ ಷಡ್ಯಂತ್ರ ಬಯಲುಗೊಳಿಸಬೇಕು ಹಾಗೂ ಡಿಎನ್‌ಎ ಆಧಾರಿತ ಎನ್‌ಆರ್ಸಿ ಮಾಡಬೇಕು ಎಂದು ಆಗ್ರಹಿಸಿ ಬಹುಜನಕ್ರಾಂತಿ ಮೋರ್ಚಾವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹಮ್ಮಿಕೊಂಡಿರುವ ‘ಪರಿವರ್ತನಾ ಯಾತ್ರೆ’ಯ ಅಂಗವಾಗಿ ಕೃಷ್ಣಾಪುರ ಚೊಕ್ಕಬೆಟ್ಟು ಎಂಜೆಎಂ ಹಾಲ್ ನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡುತ್ತಿದ್ದರು.
ಸಿಎಎ, ಎನ್‌ಆರ್‌ಸಿ ಸಂವಿಧಾನ ವಿರೋಧಿ ಎಂದು ಹೇಳಿದ ವಾಮನ್ ಮೆಶ್ರಾಮ್, ಧರ್ಮದ ಅಧಾರದಲ್ಲಿ ಸಂವಿಧಾನದಡಿ ಯಾವುದೇ ಕಾನೂನು ಮಾಡಲು ಸಾಧ್ಯವಿಲ್ಲ ಎಂದರು.
ಇವಿಯಂ ಯಂತ್ರಗಳ ಮೂಲಕ ಸ್ವತಂತ್ರ, ನಿಷ್ಪಕ್ಷಪಾತ, ಪಾರದರ್ಶಕ ಚುನಾವಣೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ 2013ರ ಅಕ್ಟೋಬರ್ 8ರಂದು ನೀಡಿದ ಆದೇಶದಲ್ಲಿ ತಿಳಿಸಿದೆ. ಆದರೆ ಈ ಆದೇಶದ ಬಗ್ಗೆ ಸುಶಿಕ್ಷಿತರಿಗೆ ಮಾಹಿತಿ ಇಲ್ಲವಾಗಿದೆ. ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ಆಗ ಕಾಂಗ್ರೆಸ್ ಸರಕಾರ 2004, 2009ರಲ್ಲಿ ಇವಿಎಂ ಯಂತ್ರಗಳ ಹಗರಣದ ಮೂಲಕ ಅಧಿಕಾರಕ್ಕೆ ಬಂದಿರುವುದಾಗಿ ವಾದಿಸಿದ್ದರು. ಇವಿಎಂನಲ್ಲಿ ನಾವು ಚಲಾಯಿಸಿದ ಮತ ನಾವು ಯಾರಿಗೆ ಚಲಾಯಿಸಿದ್ದೆವೆ ಎಂದು ತಿಳಿಯುವ ಅವಕಾಶ ಇಲ್ಲ. ಭೌತಿಕ ದಾಖಲೆ ಇರುವುದಿಲ್ಲ. ಹಾಗಾಗಿ ಅಂಕಿ ಅಂಶ ಮಾತ್ರ ಅದರಲ್ಲಿರುತ್ತದೆ. ಅದರ ಭೌತಿಕ ಪರಿಶೀಲನೆ ಸಾಧ್ಯ ಇಲ್ಲ. ಇದರಿಂದ ಮರು ಎಣಿಕೆಗೆ ಅವಕಾಶವಿಲ್ಲ ಎಂಬ ನಾಲ್ಕು ಅಂಶಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು. ಇದಕ್ಕೆ ಪರ್ಯಾಯ ಏನು ಎಂದಾಗ ಅವರು ಸೂಚಿಸಿದ್ದು ಎಟಿಎಂನಂತೆ ಮತ ಹಾಕಿದಾಗ ಮತ್ತು ತೆಗೆದಾಗ ರಶೀದಿ ದೊರಕುವಂತೆ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು. ಅದರಂತೆ ವಿವಿಪ್ಯಾಟ್ ಅಳವಡಿಸಲು ನಿರ್ಧರಿಸಲಾಯಿತು. ಆದರೆ 2014ರ ಚುನಾವಣೆಯಲ್ಲಿ ಇದು ಸಮರ್ಪಕವಾಗಿ ಅಳವಡಿಸಲಾಗಲಿಲ್ಲ. ಅದು ಅಂಕಿ ಅಂಶಗಳಿಂದ ಸಾಬೀತಾಯಿತು. ಮತ್ತೆ ಕಾನೂನು ಹೋರಾಟ ಮಾಡಲಾಯಿತು. ಅದರ ಫಲವಾಗಿ 2019ರ ಚುನಾವಣೆಯಲ್ಲಿ ಎಲ್ಲ ಇವಿಎಂಗಳಿಗೂ ವಿವಿಪ್ಯಾಟ್ ಅಳವಡಿಸಲಾಯಿತು. ಆದರೆ ಅವುಗಳ ದಾಖಲೆಯನ್ನು ಬಹಿರಂಗಪಡಿಸಲಾಗುತ್ತಿಲ್ಲ. ಈ ಬಗ್ಗೆ ನನ್ನ ಕಾನೂನು ಹೋರಾಟ ಮುಂದುವರಿದಿದೆ ಎಂದ ಅವರು, ಇವಿಎಂ ಮೂಲಕ ಭಾರೀ ಚುನಾವಣಾ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದರು.
ನಿಶಾ ಮೇಶ್ರಾಮ್ ಮಾತನಾಡಿ, ಮಹಿಳೆಯರನ್ನು ಜತೆಯಾಗಿಸಿಕೊಂಡು ಹೋರಾಟ ನಡೆಸಬೇಕೆಂದು ಕರೆ ನೀಡಿದರು. ಆರಂಭದಲ್ಲಿ ಈ ಪರಿವರ್ತನಾ ಯಾತ್ರೆ ಇವಿಯಂ ರಹಸ್ಯ ಹಗರಣ ಬಯಲು ಮಾಡುವ ನಿಟ್ಟಿನಲ್ಲಿ ತಿಂಗಳ ಅವಧಿಯದ್ದಾಗಿತ್ತು. ಸಿಎಎ, ಎನ್ ಅರ್ ಸಿಯಿಂದ ಅದನ್ನು ಮುಂದು ವರಿಸಲಾಗಿದ್ದು ಮೇ 5ರವರೆಗೆ ನಡೆಯಲಿದೆ ಎಂದರು.
ಚೊಕ್ಕಬೆಟ್ಟು ಮಸೀದಿಯ ಖತೀಬ್ ಅಬ್ದುಲ್ ಅಝೀಝ್, ಎಸ್ಕೆಎಸ್ಎಂ ಸಂಘಟನೆಯ ಮುಖಂಡ ಎಂಜಿ ಮುಹಮ್ಮದ್, ದಲಿತ ಸಂಘರ್ಷ ಸಮಿತಿಯ ದೇವದಾಸ್, ನ್ಯಾಯವಾದಿ ಅಬ್ದುಲ್ ಮಜೀದ್ ಮಾತನಾಡಿದರು.
ರಾಷ್ಟ್ರೀಯ ಹಿಂದುಳಿದ ವರ್ಗದ ಅಧ್ಯಕ್ಷ ಚೌಧುರಿ ವಿಕಾಸ್ ಪಾಟೇಲ್, ರಾಷ್ಟ್ರೀಯ ಮುಸ್ಲಿಂ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಅಬ್ದುಲ್ ಹಮೀದ್ ಅಝಾರಿ, ರಾಷ್ಟ್ರೀಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ವಿಲಾಸ್ ಕಾರತ್, ಕ್ರಷ್ಣಾಪುರ ಮಸೀದಿಯ ಖತೀಬ್ ಫಾರೂಕ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರೀಯ ಮುಸ್ಲಿಂ ಮೋರ್ಚಾದ ರಾಜ್ಯ ಅಧ್ಯಕ್ಷ ತೌಫೀಕ್ ಪಾರ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಕುಮಾರ್ ಸ್ವಾಗತಿಸಿದರು.







