ಅಮೆರಿಕದ ಸಿಯಾಟಲ್ ಪಾಲಿಕೆಯಿಂದ ಸಿಎಎ, ಎನ್ ಆರ್ ಸಿ ವಿರುದ್ಧ ನಿರ್ಣಯ ಅಂಗೀಕಾರ

Photo: Twitter(@ItIsMeKyleG)
ಸಿಯಾಟೆಲ್: ಅಮೆರಿಕದ ಸಿಯಾಟಲ್ ಮಹಾನಗರ ಪಾಲಿಕೆ ಭಾರತದ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್ ಆರ್ ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ನಿರ್ಣಯ ಅಂಗೀಕರಿಸಿದ ಮೊಟ್ಟಮೊದಲ ಸ್ಥಳೀಯ ಸಂಸ್ಥೆ ಎನಿಸಿಕೊಂಡಿದೆ.
ಪಾಲಿಕೆಯ ನಿರ್ಣಯವನ್ನು ದಕ್ಷಿಣ ಏಷ್ಯಾ ಸಿಯಾಟೆಲ್ ಕ್ಷೇತ್ರ ಒಕ್ಕೂಟದ ವತಿಯಿಂದ ಸ್ವಾಗತಿಸಲಾಯಿತು. ನಗರದಲ್ಲಿ ಸಂಘಟನೆಯ ನೂರಾರು ಕಾರ್ಯಕರ್ತರು ರ್ಯಾಲಿ ನಡೆಸಿ ಸಂಭ್ರಮ ಆಚರಿಸಿದರು. ಇದಕ್ಕೂ ಮುನ್ನ ಸಿಯಾಟೆಲ್ ನಗರ ಪಾಲಿಕೆ ಎನ್ಆರ್ಸಿ ಹಾಗೂ ಸಿಎಎ ವಿರುದ್ಧದ ನಿರ್ಣಯ (ಸಂಖ್ಯೆ 31926) ಆಂಗೀಕರಿಸಿತ್ತು. ನಿರ್ಣಯದ ಮೇಲಿನ ಮತದಾನದ ವೇಳೆ ನೂರಾರು ಮಂದಿ ಬೆಂಬಲಾರ್ಥವಾಗಿ ಪಾಲಿಕೆ ಆವರಣದಲ್ಲಿ ಸೇರಿದ್ದರು. ಪಾಲಿಕೆ ಸದಸ್ಯೆ ಕ್ಷಮಾ ಸಾವಂತ್ ಮಂಡಿಸಿದ ನಿರ್ಣಯವನ್ನು ಸಿಯಾಟೆಲ್ ನಗರಪಾಲಿಕೆ ಆಂಗೀಕರಿಸಿತು. ಜಾತಿ- ಧರ್ಮಗಳ ಭೇದವಿಲ್ಲದೇ ದಕ್ಷಿಣ ಏಷ್ಯಾ ಸಮುದಾಯದ ಬೆಂಬಲಕ್ಕೆ ನಿಲ್ಲುವುದಾಗಿ ನಿರ್ಣಯದಲ್ಲಿ ಹೇಳಲಾಗಿದೆ.
"ವಿಭಜನಕಾರಿ ಮತ್ತು ನಿರಂಕುಶದ ಪ್ರತೀಕವಾದ ಸಿಎಎ ಹಾಗೂ ಎನ್ಆರ್ಸಿಯನ್ನು ತಿರಸ್ಕರಿಸುವ ನಿರ್ಣಯವನ್ನು ನಾವು ಸ್ವಾಗತಿಸುತ್ತೇವೆ. ಸಿಎಎ ಹಾಗೂ ಎನ್ ಆರ್ ಸಿ ಅಸಂವಿಧಾನಿಕ ಹಾಗೂ ಲಕ್ಷಾಂತರ ಮುಸ್ಲಿಮರು, ದಲಿತರು ಮತ್ತು ಅಲ್ಪಸಂಖ್ಯಾತರ ಹಕ್ಕು ಕಸಿಯುವ ಹುನ್ನಾರ" ಎಂದು ಭಾರತೀಯ ಅಮೆರಿಕನ್ ಮುಸ್ಲಿಂ ಮಂಡಳಿಯ ಸಿಯಾಟೆಲ್ ಘಟಕದ ವಕ್ತಾರ ಜಾವೇದ್ ಸಿಕಂದರ್ ಹೇಳಿದ್ದಾರೆ.





