ಶಾಹಿನ್ ಬಾಗ್ ಪ್ರತಿಭಟನಾ ಸ್ಥಳದಲ್ಲಿ ಕೇಂದ್ರಬಿಂದುವಾಗಿದ್ದ ನಾಲ್ಕು ತಿಂಗಳ ಮಗು ಮೃತ್ಯು

ಪೈಲ್ ಚಿತ್ರ
ಹೊಸದಿಲ್ಲಿ: ಶಾಹಿನ್ ಬಾಗ್ ನಲ್ಲಿ ಸಿಎಎ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೇಂದ್ರಬಿಂದುವಾಗಿದ್ದ ನಾಲ್ಕು ತಿಂಗಳ ಹಸುಳೆ ತೀವ್ರ ಶೀತ ಮತ್ತು ಉಸಿರಾಟದ ತೊಂದರೆಯಿಂದ ಮೃತಪಟ್ಟಿದೆ.
ನಾಲ್ಕು ತಿಂಗಳ ಮುಹಮ್ಮದ್ ಜಹಾನ್ ಪ್ರತಿಭಟನಾ ಸ್ಥಳದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ. ಪ್ರತಿಭಟನಾನಿರತ ತಾಯಿಯ ಜತೆಗಿದ್ದ ಮಗುವನ್ನು ಪ್ರತಿಭಟನಾಕಾರರು ಎತ್ತಿಕೊಂಡು ಮುದ್ದಾಡುತ್ತಿದ್ದರು. ಮಗುವಿನ ಗಲ್ಲದ ಬಳಿ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸುತ್ತಿದ್ದರು. ಆದರೆ ತೀವ್ರ ಶೀತ ಹಾಗೂ ಉಸಿರಾಟದ ತೊಂದರೆಯಿಂದಾಗಿ ಮಗು ಕಳೆದ ವಾರ ಮೃತಪಟ್ಟಿದೆ. ಪ್ರತಿಭಟನೆಯ ಹೊರಗೆ ತೀವ್ರ ಚಳಿ ಇದ್ದ ಕಾರಣದಿಂದ ಮಗುವಿಗೆ ನೆಗಡಿಯಾಗಿತ್ತು. ಇಷ್ಟಾದರೂ ತಾಯಿ ಮಾತ್ರ ಅಚಲವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. "ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಈ ಪ್ರತಿಭಟನೆ ಮುಂದುವರಿಸುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.
ಮಗುವಿನ ತಂದೆ ಮುಹಮ್ಮದ್ ಆರಿಫ್ ಮತ್ತು ತಾಯಿ ನಾಝಿಯಾ ಪುಟ್ಟ ಗುಡಿಸಲಿನಲ್ಲಿ, ಐದು ವರ್ಷದ ಮಗಳು ಹಾಗೂ ಒಂದು ವರ್ಷದ ಮತ್ತೊಬ್ಬ ಮಗನೊಂದಿಗೆ ವಾಸವಿದ್ದಾರೆ. ಉತ್ತರ ಪ್ರದೇಶದ ಬರೇಲಿ ಮೂಲದವರಾದ ಇವರದ್ದು ಸಂಕಷ್ಟದ ಬದುಕು. ಆರಿಫ್ ಕಸೂತಿ ಕೆಲಸ ಮಾಡುತ್ತಾರೆ ಹಾಗೂ ಇ-ರಿಕ್ಷಾ ಓಡಿಸುತ್ತಾರೆ. ಪತ್ನಿ ಕಸೂತಿ ಕೆಲಸಕ್ಕೆ ನೆರವಾಗುತ್ತಾರೆ.
"ಕಳೆದ ತಿಂಗಳು ಕಸೂತಿ ಜತೆ ಬ್ಯಾಟರಿ ರಿಕ್ಷಾ ಓಡಿಸಿದರೂ ಸಾಕಷ್ಟು ಆದಾಯ ಗಳಿಸಲು ಸಾಧ್ಯವಾಗಲಿಲ್ಲ. ಈಗ ಮಗುವನ್ನೂ ಕಳೆದುಕೊಳ್ಳುವ ಮೂಲಕ ಎಲ್ಲವನ್ನೂ ಕಳೆದುಕೊಂಡಂತಾಗಿದೆ" ಎಂದು "ಐ ಲವ್ ಮೈ ಇಂಡಿಯಾ" ಎಂಬ ಘೋಷಣೆ ಇದ್ದ ಉಣ್ಣೆ ಟೋಪಿ ಧರಿಸಿದ್ದ ಜಹಾನ್ ನ ಚಿತ್ರವನ್ನು ತೋರಿಸುತ್ತಾ ಹೇಳುತ್ತಾರೆ.







