ಬಾಪು ಕುರಿತು ಅನಂತ್ ಕುಮಾರ್ ಹೆಗ್ಗಡೆ ಹೇಳಿಕೆ: ಲೋಕಸಭೆಯಿಂದ ಹೊರ ನಡೆದ ಪ್ರತಿಪಕ್ಷ

ಹೊಸದಿಲ್ಲಿ, ಫೆ. 4: ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಗಡೆ ಅವರು ಮಹಾತ್ಮಾ ಗಾಂಧಿ ಕುರಿತು ನೀಡಿದ ಹೇಳಿಕೆ ವಿರೋಧಿಸಿ ಲೋಕಸಭೆಯಲ್ಲಿ ಕಾಂಗ್ರೆಸ್ ಹಾಗೂ ಇತರ ಕೆಲವು ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದವು. ಅಲ್ಲದೆ ಕಲಾಪ ತ್ಯಜಿಸಿದವು.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಕಾಂಗ್ರೆಸಿಗರು ಮಹಾತ್ಮಾ ಗಾಂಧಿ ಅವರ ನಕಲಿ ಅನುಯಾಯಿಗಳು ಎಂದರು.
ಶೂನ್ಯ ವೇಳೆಯಲ್ಲಿ ಈ ವಿಷಯ ಎತ್ತಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಮಹಾತ್ಮಾ ಗಾಂಧಿ ತೋರಿಸಿದ ಮಾರ್ಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಕಾರರನ್ನು ರಾಷ್ಟ್ರಾದ್ಯಂತ ಬಂಧಿಸಲಾಗುತ್ತಿದೆ ಎಂದರು.
ಜಗತ್ತಿನಾದ್ಯಂತ ಪೂಜೆಗೆ ಒಳಗಾಗುತ್ತಿರುವ ಮಹಾತ್ಮಾ ಗಾಂಧಿ ಅವರನ್ನು ನಿಂದಿಸಲಾಗುತ್ತಿದೆ. ರಾಮನನನ್ನು ಪೂಜಿಸುವವರನ್ನು ಅವರು ಟೀಕಿಸುತ್ತಿದ್ದಾರೆ. ಮಹಾತ್ಮಾ ಗಾಂಧಿ ಜಗತ್ತಿನ ಪಿತನಂತೆ ಎಂದು ಚೌಧರಿ ಹೇಳಿದರು.
ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನದ ನೆನೆಪಿನಲ್ಲಿ ಬಿಜೆಪಿ ನಾಯಕರು ರ್ಯಾಲಿ ನಡೆಸಿದ್ದಾರೆ. ಆದರೆ, ಪ್ರತಿಪಕ್ಷ ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು.
ಹೇಳಿಕೆಗೆ ವಿಷಾದ ವ್ಯಕ್ತಪಡಿಸುವಂತೆ ಸಂಬಂಧಿತ ಸದಸ್ಯರಿಗೆ ಸೂಚಿಸಲಾಗಿದೆ. ಆದರೆ, ಅವರು ತಾನು ಅಂತದ್ದೇನು ಹೇಳಿಲ್ಲ ಎಂದು ತಿಳಿಸಿದ್ದಾರೆ ಎಂದು ಪ್ರಹ್ಲಾದ್ ಜೋಷಿ ಹೇಳಿದರು.
ಬಿಜೆಪಿ ಜನರು ಮಹಾತ್ಮಾ ಗಾಂಧಿ ಅವರ ನಿಜವಾದ ಅನುಯಾಯಿಗಳು. ಆದರೆ, ಈ ಜನರು ಮಹಾತ್ಮಾ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಕಲಿ ಭಕ್ತರು ಎಂದು ಅವರು ತಿಳಿಸಿದರು.
ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಯನ್ನು ಸರಕಾರ ಸಮರ್ಥಿಸಿಕೊಂಡಿರುವುದರಿಂದ ನಾವು ಕಲಾಪ ತ್ಯಜಿಸುತ್ತಿದ್ದೇವೆ ಎಂದು ಚೌಧುರಿ ಹೇಳಿದರು.







