ಶರ್ಜೀಲ್ ಇಮಾಮ್ ಪರ ಘೋಷಣೆ ಕೂಗಿದ 51 ಮಂದಿ ವಿರುದ್ಧ ದೇಶದ್ರೋಹ ಪ್ರಕರಣ

ಶರ್ಜೀಲ್ ಇಮಾಮ್ (Facebook)
ಮುಂಬೈ: ಕ್ವೀರ್ ಪ್ರೈಡ್ ಪರೇಡ್ನಲ್ಲಿ ಶನಿವಾರ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಶರ್ಜೀಲ್ ಇಮಾಮ್ ಪರ ಘೋಷಣೆ ಕೂಗಿದ್ದಕ್ಕಾಗಿ ಸಾಮಾಜಿಕ ಕಾರ್ಯಕರ್ತೆ ಊರ್ವಶಿ ಚೂಡಾವಾಲ ಸೇರಿದಂತೆ 51 ಮಂದಿಯ ವಿರುದ್ಧ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಘೋಷಣೆ ಕೂಗಿದವರ ವಿರುದ್ಧ ಬಿಜೆಪಿ ನಾಯಕಿ ಕೀರ್ತಿ ಸೋಮಯ್ಯ ಪ್ರಕರಣ ದಾಖಲಿಸಿದ್ದರು.
ಹೋರಾಟಗಾರರ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 124ಎ(ದೇಶದ್ರೋಹ), 153ಬಿ (ದೇಶದ ಏಕತೆಗೆ ಧಕ್ಕೆ) 505 (ಸಾರ್ವಜನಿಕ ಕುಚೋದ್ಯ), 34 (ಸಮಾನ ಹಿತಾಸಕ್ತಿ) ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಪ್ರಣಯ್ ಅಶೋಕ್ ಹೇಳಿದ್ದಾರೆ.
ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಗರದ ವಾರ್ಷಿಕ ಪ್ರೈಡ್ ಮಾರ್ಚ್ ಹಮ್ಮಿಕೊಳ್ಳಲು ಉದ್ದೇಶಿಸಲಾಗಿತ್ತು. ಆದರೆ ಈ ಯಾತ್ರೆಯಲ್ಲಿ ಸಿಎಎ ವಿರುದ್ಧದ ಘೋಷಣೆ ಹಾಗೂ ಫಲಕಗಳನ್ನು ಪ್ರದರ್ಶಿಸಲಾಗುತ್ತದೆ ಎಂಬ ಕಾರಣ ನೀಡಿ ಪೊಲೀಸರು ಅನುಮತಿ ನಿರಾಕರಿಸಿದ್ದರು. ಆದಾಗ್ಯೂ ಸಂಘಟಕರು ಷರತ್ತುಬದ್ಧ ಅನುಮತಿ ಪಡೆದು ಆಝಾದ್ ಮೈದಾನದಲ್ಲಿ ಕಾರ್ಯಕ್ರಮ ನಡೆಸಿದ್ದರು.
ಈ ಯಾತ್ರೆ ವೇಳೆ ಚೂಡಾವಾಲಾ ಅವರು 'ಶರ್ಜೀಲ್ ತೇರೇ ಸಪ್ನೋ ಕೋ ಹಮ್ ಮಂಝಿಲ್ ತಕ್ ಪಹೂಚಾಯೇಂಗೆ' (ಶರ್ಜೀಲ್ ನಿಮ್ಮ ಕನಸನ್ನು ನನಸುಗೊಳಿಸುತ್ತೇವೆ) ಎಂಬ ಘೋಷಣೆಗಳನ್ನು ಕೂಗಿದ್ದಾಗಿ ಬಿಂಬಿಸುವ ವಿಡಿಯೊಗಳು ಹರಿದಾಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.







