"130 ಕೋಟಿ ಜನರಲ್ಲಿ 23 ಕೋಟಿ ಓಟು ಮಾತ್ರ ನಿಮಗೆ ಸಿಕ್ಕಿದ್ದು ಎಂಬುದನ್ನು ಮರೆಯಬೇಡಿ"
ಕೇಂದ್ರದ ವಿರುದ್ಧ ಮಹುವಾ ವಾಗ್ದಾಳಿ

ಹೊಸದಿಲ್ಲಿ: ದೇಶದ 130 ಕೋಟಿ ಜನರ ಪೈಕಿ 23 ಕೋಟಿ ಮತಗಳು ಮಾತ್ರ ನಿಮಗೆ ಸಿಕ್ಕಿದ್ದು ಎಂಬುದನ್ನು ಮರೆಯಬೇಡಿ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿವಾದಾತ್ಮಕ ಸಿಎಎ, ಎನ್‍ಆರ್ ಸಿ ಮತ್ತು ಭಿನ್ನಾಭಿಪ್ರಾಯವನ್ನು ಕೇಂದ್ರ ಸರ್ಕಾರ ಹತ್ತಿಕ್ಕುತ್ತಿರುವ ಕ್ರಮವನ್ನು ಖಂಡಿಸಿದರು.
ತಮಗೆ ಮತ ಹಾಕಿದವರಿಗೆ ಬಿಜೆಪಿ ದ್ರೋಹ ಎಸಗಿದೆ. ಇದೀಗ ತಮ್ಮನ್ನು ಅಧಿಕಾರಕ್ಕೆ ತಂದ ಮತದಾರರ ಪೌರತ್ವವನ್ನೇ ಪ್ರಶ್ನಿಸುತ್ತಿದೆ. ಸರ್ಕಾರವಾಗಿ ನಿಮಗೆ ಮಾನವೀಯತೆ ಇಲ್ಲ ಎಂದು ಟೀಕಿಸಿದರು. ದೇಶದ 130 ಕೋಟಿ ಮಂದಿಯ ಪೈಕಿ ನಿಮಗೆ ಮತ ಹಾಕಿರುವುದು ಕೇವಲ 23 ಕೋಟಿ ಮಂದಿ. ನೀವು ಪ್ರಜಾಪ್ರಭುತ್ವದ ಪರದಿಯಿಂದ ಹೊರಹೋಬಾರದು ಹಾಗೂ ಸಂವಿಧಾನಬಾಹಿರ ಕ್ರಮವನ್ನು ಪ್ರದರ್ಶಿಸಬಾರದು ಎಂದು ಕಿವಿಮಾತು ಹೇಳಿದರು.
ಸರ್ಕಾರದ ಹೆಜ್ಜೆಗಳಲ್ಲಿ ಫ್ಯಾಸಿಸಂನ ಆರಂಭಿಕ ಲಕ್ಷಣಗಳು ಕಾಣುತ್ತಿವೆ ಎಂದು ಮಹುವಾ ಮೊಯಿತ್ರ ಜೂನ್‍ನಲ್ಲಿ ಮಾಡಿದ ತಮ್ಮ ಮೊದಲ ಭಾಷಣದಲ್ಲಿ ಆಪಾದಿಸುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದರು.





